October 12, 2026
Monday, October 12, 2026
spot_img

ರಾತ್ರಿ10 ಗಂಟೆ ಬಳಿಕ ಡಿಜೆ ಬಳಸಿದರೆ ನ್ಯಾಯಾಂಗ ನಿಂದನೆ ಪ್ರಕರಣ: ವಕೀಲ ಅಮೃತೇಶ್ ಎಚ್ಚರಿಕೆ

ಹೊಸದಿಗಂತ ವರದಿ ಮಡಿಕೇರಿ:

ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಯೊಂದಿಗೆ ಭಾನುವಾರ ರಾತ್ರಿ ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ ದೊರಕಿದ್ದು, ಸೋಮವಾರ ರಾತ್ರಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಲಿವೆ.

ಆದರೆ ಇದರ ನಡುವೆಯೇ ಮಡಿಕೇರಿ ದಸರಾದಲ್ಲಿ ರಾತ್ರಿ 10 ಗಂಟೆ ಬಳಿಕ ಡಿಜೆ ಬಳಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆಯೂ ವಕೀಲರೊಬ್ಬರಿಂದ ಕೇಳಿ ಬಂದಿದೆ.

ಈಗಾಲೇ ಜಿಲ್ಲಾಡಳಿತ, ದಸರಾ ಸಮಿತಿ, ದಶಮಂಟಪ ಸಮಿತಿ ಪ್ರಮುಖರಿಗೆ ನೋಟೀಸ್ ನೀಡಿರುವ ಹೈಕೋರ್ಟ್ ವಕೀಲ ಅಮೃತೇಶ್ ಅವರು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಡಿಕೇರಿ ದಸರಾದಲ್ಲಿ  ಡಿಜೆಗೆ ಸಮಯ ಮಿತಿಗೊಳಿಸುವಂತೆ ಹಾಗೂ ಕೋರ್ಟ್  ನಿರ್ದೇಶನ ಪಾಲಿಸುವಂತೆ   ಮನವಿ ಮಾಡಿದ್ದಾರೆ.

ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ  ಕೇಳಿಲ್ಲ. ಶಬ್ಧವನ್ನು ತಗ್ಗಿಸಿ ಎಂದಷ್ಟೇ ಕೋರಿದ್ದೇನೆ. ವೀರಾಜಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದುರಂತಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಆಸ್ಪತ್ರೆಯ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ಸಾಕುಪ್ರಾಣಿಗಳಿಗೆ ಅತಿಯಾದ ಡಿಜೆಯ ಶಬ್ಧದಿಂದ, ಲೇಸರ್ ಲೈಟ್’ಗಳಿಂದ ಸಮಸ್ಯೆಯಾಗುತ್ತಿದೆ ಎಂದು ಹೈಕೋರ್ಟ್’ಗೂ ತಿಳಿಸಿದ್ದೇನೆ ಎಂದು ವಕೀಲ ಅಮೃತೇಶ್ ತಿಳಿಸಿದ್ದಾರೆ.

ಡಿಜೆಯ ಪರಿಣಾಮಗಳೇನು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಅದರಂತೆ ರಾತ್ರಿ 10 ಗಂಟೆ ನಂತರ ಡಿಜೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬೇಡಿ ಎಂದು ಕೋರಿದ್ದೇನೆ. ಈ ಸಲ ರಾತ್ರಿ 10 ಗಂಟೆಯ ನಂತರ ಡಿಜೆ ಬಳಸಿದ್ದೇ ಆದಲ್ಲಿ ಅದನ್ನು ನ್ಯಾಯಾಂಗ ನಿಂದನೆಯ ಪ್ರಕರಣ ಎಂದು ಪರಿಗಣಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ವಕೀಲ ಅಮೃತೇಶ್ ಅವರೊಂದಿಗೆ ಶಬ್ಧ ಮಾಲಿನ್ಯದ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವ  ಮಡಿಕೇರಿಯ ಹಿರಿಯ ವರ್ತಕ ಶಿವರಾಮ ಶೆಟ್ಟಿ ಹಾಜರಿದ್ದರು.

Must Read