ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾ ಪುಸ್ತಕ ಪ್ರದರ್ಶನದಲ್ಲಿ ಕನ್ನಡ ಪ್ರೇಮವನ್ನು ಬೆಸೆಯುವ ಅಭಿಯಾನವೊಂದು ನಡೆಯುತ್ತಿದೆ. ಇಲ್ಲಿಗೆ ಬಂದು ಕನ್ನಡದ ಕವಿತೆ ಅಥವಾ ಕನ್ನಡದ ಹಾಡನ್ನು ಹೇಳಿದರೆ ಉಚಿತವಾಗಿ ಸಸಿಯನ್ನು ನೀಡಲಾಗುತ್ತದೆ.
ಪರಿಸರ ಸಂರಕ್ಷಣೆ ಹಾಗೂ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಬಿಎಂಟಿಸಿ ಮೆಕ್ಯಾನಿಕ್ ಒಬ್ಬರು ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕನ್ನಡ ಹಾಡು ಹಾಡುವವರಿಗೆ ಅಥವಾ ಕವಿತೆ ವಾಚಿಸುವವರಿಗೆ ಉಚಿತವಾಗಿ ಸಸಿಗಳನ್ನು ನೀಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಯಾಂತ್ರಿಕ ವಿಭಾಗದಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಮಡೆನೂರು ಅವರು ದಸರಾ ಪುಸ್ತಕ ಪ್ರದರ್ಶನದಲ್ಲಿ ‘ಕವಿತೆ ಹೇಳಿ, ಗಿಡ ಪಡೆಯಿರಿ’ ಎಂಬ ವಿನೂತನ ಅಭಿಯಾನದಡಿ ಮಳಿಗೆಯೊಂದನ್ನು ತೆರೆದಿದ್ದಾರೆ. ಇಲ್ಲಿ ಕನ್ನಡ ಹಾಡು ಹಾಡುವ ಅಥವಾ ಸ್ವರಚಿತ ಹಾಗೂ ಇತರ ಕವಿಗಳ ಕವಿತೆಗಳನ್ನು ವಾಚಿಸುವವರಿಗೆ ಔಷಧೀಯ ಸಸಿ ಅಥವಾ ಹಣ್ಣಿನ ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ.



