October 12, 2026
Monday, October 12, 2026
spot_img

ಸೌಜನ್ಯ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್ಐಟಿ, ಇಂದು ಬೆಳ್ತಂಗಡಿಗೆ ಟೀಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮತ್ತಷ್ಟು ಚುರುಕುಗೊಳಿಸಿದ್ದು, ಇಂದು ಬೆಳ್ತಂಗಡಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಲಿದೆ.

ಒಟ್ಟು 20 ಸದಸ್ಯರಿರುವ ತಂಡ ಇದೀಗ ಎರಡನೇ ಬಾರಿಗೆ ಬೆಳ್ತಂಗಡಿಗೆ ಭೇಟಿ ನೀಡುತ್ತಿದ್ದು, ಸ್ಥಳ ಪರಿಶೀಲನೆ ನಡೆಸಲಿದೆ. ಜೊತೆಗೆ ಸರಣಿ ಸಭೆಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನಡೆದ ತನಿಖೆಯ ಅಂಶಗಳು, ನ್ಯಾಯಾಲಯದ ನಿರ್ದೇಶನಗಳು ಹಾಗೂ ಮುಂದಿನ ತನಿಖೆಯ ರೂಪರೇಷೆಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯುವ ಸಾಧ್ಯತೆಯಿದೆ.

ನಿನ್ನೆ ಕೂಡ ಎಸ್‌ಐಟಿ ಮುಖ್ಯಸ್ಥರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ತನಿಖಾಧಿಕಾರಿ ಲೋಕೇಶ್ ಜಗಲಾಸರ್, ಎಸಿಪಿಗಳಾದ ರಾಮಚಂದ್ರ ಮತ್ತು ಮನೋಜ್ ಭಾಗವಹಿಸಿದ್ದರು. ಸಭೆಯ ಬಳಿಕ ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಮುಂದೆ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಕುರಿತು ಮಾಹಿತಿಯನ್ನೂ ತಂಡ ವಿವರಿಸಿದೆ.

ಈ ನಡುವೆ ಅ.10 ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ 14 ವರ್ಷಗಳು ತುಂಬಿದ ಹಿನ್ನೆಲೆ 14ನೇ ವರ್ಷದ ಸಂಸ್ಮರಣೆ ಅಂಗವಾಗಿ ಬೆಳ್ತಂಗಡಿಯಲ್ಲಿ ನ್ಯಾಯದ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳ್ತಂಗಡಿಯಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೂ ಮುನ್ನ ಉಜಿರೆಯಿಂದ ಬೃಹತ್‌ ಮೌನ ಮೆರವಣಿಗೆ ನಡೆಸಲಾಗಿತ್ತು. ಸಾವಿರಾರು ಜನರು ಪಾಲ್ಗೊಂಡು ಸೌಜನ್ಯ ಪ್ರಕರಣದಲ್ಲಿ ಇನ್ನಾದರೂ ನ್ಯಾಯ ಸಿಗಲೇಬೇಕು ಎಂದು ಆಗ್ರಹಿಸಿದ್ದರು. ಎಸ್‌ಐಟಿ ತಂಡದ ತನಿಖೆಯ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಶೀಘ್ರವೇ ಸತ್ಯ ಹೊರಬರಲಿದೆ ಎಂದು ಹೋರಾಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದರು.

2012ರ ಅಕ್ಟೋಬರ್ 10ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ 17 ವರ್ಷದ ಬಾಲಕಿ ಸೌಜನ್ಯಾಳ ಮೃತದೇಹ ಅತ್ಯಾಚಾರ ನಡೆಸಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣದ ಕುರಿತು ತನಿಖಾ‌ ಸಂಸ್ಥೆಗಳು ತನಿಖೆ ನಡೆಸಿದ್ದರೂ ಹಂತಕ ಮಾತ್ರ ಪತ್ತೆಯಾಗಿರಲಿಲ್ಲ. ಸೌಜನ್ಯ ಮನೆಮಂದಿ ಮನವಿ ಪುರಸ್ಕರಿಸಿದ ಸುಪ್ರೀಂ ಕೋಟ್೯, ಹೊಸದಾಗಿ ತನಿಖೆ ನಡೆಸುವಂತೆ ಸೂಚಿಸಿದ್ದಲ್ಲದೆ. ಎಸ್ಐಟಿ ರಚಿಸಿ, ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

Must Read