ಹೊಸದಿಗಂತ ವರದಿ ಹೊಳೆನರಸೀಪುರ:
ವಯಸ್ಸು ಸಾಧನೆಗೆ ಎಂದಿಗೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಕ್ರೀಡಾ ಪ್ರತಿಭೆಯ ಮೂಲಕ ಸಾಬೀತುಪಡಿಸಿರುವ ಪಟ್ಟಣದ ನರಸಿಂಹ ನಾಯಕ ನಗರದ ನಿವಾಸಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ವಿಜಯಕುಮಾರಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಐದನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೊಯಮತ್ತೂರಿನಲ್ಲಿ ಅ. 9ರಿಂದ 11ರವರೆಗೆ ನಡೆದ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದ ವಿಜಯಕುಮಾರಿ ಅವರು ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಸಾಧನೆಯಿಂದ ಹೊಳೆನರಸೀಪುರ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ ಪದಕಗಳ ಬೇಟೆ
ಲಾಂಗ್ ಜಂಪ್, ಹೈ ಜಂಪ್, ಟ್ರಿಪಲ್ ಜಂಪ್ ಹಾಗೂ ರ್ಡಲ್ಸ್ ಸೇರಿದಂತೆ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದ ವಿಜಯಕುಮಾರಿ, ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ರಿಲೇ ಓಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ನಿರಂತರ ಅಭ್ಯಾಸ, ಕ್ರೀಡೆಯ ಮೇಲಿನ ಅಪಾರ ಆಸಕ್ತಿ ಹಾಗೂ ಸಾಧಿಸುವ ಛಲದಿಂದ ಅವರು ಈ ಯಶಸ್ಸು ಗಳಿಸಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ 30ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗೆ ವಿವಿಧ ವಯೋಮಾನದ ವಿಭಾಗಗಳಲ್ಲಿ ಸ್ರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. 85ರಿಂದ 90 ವರ್ಷ ವಯಸ್ಸಿನ ಹಿರಿಯ ಕ್ರೀಡಾಪಟುಗಳೂ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕ್ರೀಡಾಸಕ್ತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾರಿದೆ.
ನಿವೃತ್ತಿಯ ನಂತರವೂ ಸಾಧನೆಯ ಹಾದಿ
ಅಂಗನವಾಡಿ ಶಿಕ್ಷಕಿಯಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಜಯಕುಮಾರಿ ಅವರು, ನಿವೃತ್ತಿಯ ನಂತರವೂ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಸಾಧನೆಯ ಪಯಣವನ್ನು ಮುಂದುವರಿಸಿದ್ದಾರೆ. ವಯಸ್ಸಿನ ಮಿತಿಗಳನ್ನು ಮೀರಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಪದಕಗಳನ್ನು ಗೆಲ್ಲುತ್ತಿರುವ ಇವರ ಸಾಧನೆ ಹಿರಿಯ ನಾಗರಿಕರಿಗೂ ಸ್ಪೂರ್ತಿದಾಯವಾಗಿದೆ.
ವಿಜಯಕುಮಾರಿ ಅವರ ಕ್ರೀಡಾ ಸಾಧನೆಗೆ ಪಟ್ಟಣದ ಕ್ರೀಡಾಭಿಮಾನಿಗಳು ಹಾಗೂ ಸರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



