October 13, 2026
Tuesday, October 13, 2026
spot_img

ಶೃಂಗೇರಿಯಲ್ಲಿ ವೈದ್ಯಕೀಯ ಕ್ರಾಂತಿ: ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಮತ್ತು ಎಮ್‌ಆರ್‍ಐ ಘಟಕ ಉದ್ಘಾಟನೆ

ಹೊಸದಿಗಂತ ವರದಿ ಶೃಂಗೇರಿ :

ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಹಾಗೂ ಎಮ್‌ಆರ್‍ಐ ಸೆಂಟರ್‍ ಗಳನ್ನು ಅಕ್ಟೋಬರ್‍ 11, ಭಾನುವಾರ ಉದ್ಘಾಟಿಸಲಾಯಿತು.

ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಶ್ರೀಗಳು ‘ ಶ್ರೀ ಭಾರತೀತೀರ್ಥ ಸೆಂಟರ್‍ ಫಾರ್ ಕಾರ್ಡಿಯಾಕ್‌ ಮತ್ತು ನ್ಯೂರೋ ಸೈನ್ಸ್‌ ಹಾಗೂ ಶ್ರೀ ವಿದ್ಯಾರಣ್ಯ ಸೆಂಟರ್ ಫಾರ್ ರೇಡಿಯೋಲಾಜಿ ಮತ್ತು ಇಮೇಜಿಂಗ್‌’ ಘಟಕವನ್ನು ಉದ್ಘಾಟಿಸಿ, ಆಸ್ಪತ್ರೆಯ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರಂಗೇರಿ ಮಠದ ಸಿಇಒ ಮತ್ತು ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿ ,‘ ಶೃಂಗೇರಿ ಸಂಸ್ಥಾನವು ಮೊದಲಿನಿಂದಲೂ ನಮ್ಮ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇದೇ ಉದ್ದೇಶದಿಂದ ಮಲೆನಾಡಿಗರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಈಗ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ ಹಾಗೂ ಎಮ್‌ಆರ್‍ಐ ಸೌಲಭ್ಯಗಳನ್ನು ಆರಂಭಿಸಲಾಗಿದೆ.
ಫಿಲಿಫ್ಸ್‌ ಸಂಸ್ಥೆಯ 7C20 3.0 ಉಪಕರಣ ಆಫ್ಟಿಕ್‌ ಫೈಬರ್‍ ಸಂಪರ್ಕ ಹೊಂದಿದೆ. ಈ ಮೂಲಕ ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಉಪಕರಣ ಹೊಂದಿರುವ ಕರ್ನಾಟಕದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸೇರುತ್ತದೆ. ಇದು ಕಾರ್ಡಿಯೋ ಜೊತೆಗೆ ನ್ಯೂರೊ ಹಾಗೂ ವ್ಯಾಸ್ಕ್ಯುಲರ್‍ ಸಂಬಂಧಿತ ಚಿಕಿತ್ಸೆ ತಂತ್ರಜ್ಞಾನವನ್ನು ಹೊಂದಿದೆ. ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವುದು ನಮಗೆ ಸಂತಸದ ವಿಷಯ’ ಎಂದು ಹೇಳಿದರು.

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡೆಪ್ಯೂಟಿ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಲಕ್ಷ್ಮೀ ರಾಘವ ಮಾತನಾಡಿ, ‘ ನಮ್ಮಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ, ಇನ್ನು ಮುಂದೆ ಅತ್ಯಾಧುನಿಕ ಸೌಲಭ್ಯಗಳೂ ಲಭ್ಯವಿರಲಿವೆ. ಆರೋಗ್ಯ ಸಮಸ್ಯೆಯ ತುರ್ತು ಸಂದರ್ಭಗಳಲ್ಲಿ ಜನರು ಯಾವ ಊರಿಗೆ ಹೋಗಬೇಕು ಎಂಬ ಚಿಂತೆಯಲ್ಲಿ ಸಮಯ ವ್ಯರ್ಥ ಮಾಡದೇ ತಕ್ಷಣ ನಿಮ್ಮ ಶೃಂಗೇರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬಹುದು. ನಮ್ಮಲ್ಲಿ ಸೇರ್ಪಡೆಗೊಂಡಿರುವ ಕ್ಯಾಥ್ ಲ್ಯಾಬ್‌ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಹೃದಯಾಘಾತ, ಹೃದಯದಲ್ಲಿ ರಂದ್ರ ಸೇರಿ ಅನೇಕ ಹೃದ್ರೋಗ ಸಮಸ್ಯೆಗಳಿಗೆ ನಿಖರ ಚಿಕಿತ್ಸೆಯನ್ನು ನೀಡಲು ಸಶಕ್ತವಾಗಿದೆ.

ಭಾರತದಲ್ಲಿ ಕೆಲವೇ ಕೆಲವು ಆಸ್ಪತ್ರೆಗಳು ಈ ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಹೊಂದಿದ್ದು ಅದರಲ್ಲಿ ಶೃಂಗೇರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಒಂದು. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಶಿವಮೊಗ್ಗ, ಮಂಗಳೂರು ಅಥವಾ ಬೆಂಗಳೂರಿಗೆ ಪ್ರಯಾಣಿಸುವ ಬದಲು ನಮ್ಮ ಊರಿನಲ್ಲೇ ಇರುವ ಈ ಆಧುನಿಕ ಚಿಕಿತ್ಸಾ ಸೇವೆಯನ್ನು ಪಡೆದುಕೊಳ್ಳಬಹುದು. ಜೊತೆಗೆ , ಸೀಮನ್ಸ್‌ ಮ್ಯಾಗ್ನೆಟಾಮ್‌ ಫ್ಲೋ ಪ್ಲಸ್‌ 1.5T ಮಾದರಿಯ ಎಮ್‌ಆರ್‍ಐ ಉಪಕರಣ ಜನ ಸೇವೆಗೆ ಸಿದ್ಧವಾಗಿದೆ.

ಈಗಾಗಲೇ ನಮ್ಮ ಹಲವು ವೈದ್ಯಕೀಯ ಕ್ಯಾಂಪ್‌ಗಳು ಗ್ರಾಮ ಮಟ್ಟದಲ್ಲಿ ಯಶಸ್ವಿಗೊಂಡಿದ್ದು, ಉತ್ತಮ ಜನ ಬೆಂಬಲವನ್ನು ಪಡೆದಿದೆ. ಈಗ ಆಧುನಿಕ ಚಿಕಿತ್ಸಾ ಪದ್ದತಿಯೂ ನಮ್ಮ ಕೈಜೋಡಿಸಿದ್ದುಈ ಸೇವೆಯ ಪ್ರಯೋಜನೆ ಪಡೆದುಕೊಳ್ಳಬೇಕು. ಕ್ಯಾಥ್‌ ಲ್ಯಾಬ್‌ ಸೇವೆಯು ಡಿಸೆಂಬರ್‍ 1 ರಿಂದ ಸಾರ್ವಜನಿಕರಿಗೆ ಲಭ್ಯವಿದ್ದು ಎಮ್‌ಆರ್‍ಐ ಸೆಂಟರ್‍ ಸೇವೆ ಆರಂಭವಾಗಿದೆ. ನವರಾತ್ರಿ ವಿಶೇಷವಾಗಿ ಅಕ್ಟೋಬರ್‍ 12 ರಿಂದ 22ರವರೆಗೆ ಅರ್ಹ ಫಲಾನುಭವಿಗಳಿಗೆ ಉಚಿತ ಎಂಆರ್‌ಐ ಸೇವೆ ನೀಡಲಾಗುವುದು. ಈ ಕುರಿತು ಆಸ್ಪತ್ರೆಯ ಸಲಹಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಶೃಂಗೇರಿ ಮಠದ ಶಿಷ್ಯ ವೃಂದ ಉಪಸ್ಥಿತರಿದ್ದರು.

Must Read