ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತ ಕಳ್ಳತನ ಆರೋಪಗಳನ್ನು ಖಂಡಿಸಿ ವಿರೋಧ ಪಕ್ಷಗಳ ‘ಇಂಡಿ’ ಮೈತ್ರಿಕೂಟ ದೆಹಲಿಯಲ್ಲಿ ನಡೆಸಿದ ಸುಪ್ರೀಂ ಕೋರ್ಟ್ ಮೆರವಣಿಗೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗರ್ಭಿಣಿಯನ್ನು ತಳ್ಳಿ, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಗರ್ಭಿಣಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ನಾಯಕ ರಾಜೇಶ್ ಭಾಟಿಯಾ ಮಾತನಾಡಿ, ರಾತ್ರಿ 8.30ರ ಸುಮಾರಿಗೆ ಪತ್ರಕರ್ತೆಯ ಸಹೋದರಿ ರಾಜಿಂದರ್ ನಗರದಲ್ಲಿರುವ ನನ್ನ ಕಚೇರಿಗೆ ಬಂದು ನೆರವು ಕೋರಿದರು. ತಮ್ಮ ಸಹೋದರಿ ಗರ್ಭಿಣಿಯಾಗಿದ್ದು, ಕರ್ತವ್ಯದ ವೇಳೆ ರಾಹುಲ್ ಗಾಂಧಿ ಅವರನ್ನು ತಳ್ಳಿದ್ದರಿಂದ ಗಾಯಗೊಂಡಿದ್ದು ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದರು ಎಂದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಉಮಾಂಗ್ ಬಜಾಜ್, ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮತ್ತು ರಾಜೇಶ್ ಭಾಟಿಯಾ ಆಸ್ಪತ್ರೆಗೆ ಧಾವಿಸಿ ಪತ್ರಕರ್ತೆಯ ಆರೋಗ್ಯ ವಿಚಾರಿಸಿದರು. ಪತ್ರಕರ್ತೆ ರಿಚಾ ಪರಾಶರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ವೀಡಿಯೊವನ್ನು ಪ್ರದೀಪ್ ಭಂಡಾರಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಮೂರು ತಿಂಗಳ ಗರ್ಭಿಣಿಯೊಬ್ಬರು ತನ್ನ ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೆಳಕ್ಕೆ ಕೆಡವಲಾಗಿದೆ. ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಬಿಗಿಯುವ ನಾಯಕರ ಅಸಲಿ ಮುಖವಾಡ ಕಳಚಿಬಿದ್ದಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.



