ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಪನಿಯಿಂದ ಕೆಲಸ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕರೆ ಸಾಮಾನ್ಯವಾಗಿ ಮುಂದಿನ ಉದ್ಯೋಗದ ಹುಡುಕಾಟದಲ್ಲಿ ತೊಡಗಿಕೊಳ್ಳುವುದು ಸಹಜ. ಆದರೆ, ಕೆಲಸದಿಂದ ವಜಾ ಮಾಡುವ ಮುನ್ನ ಕಂಪನಿಗೆ ತಕ್ಕ ಪಾಠ ಕಲಿಸಬೇಕು ಎಂದುಕೊಂಡ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಲಹೆ ಕೇಳಿದ ಘಟನೆ ಈಗ ಮತ್ತೆ ವೈರಲ್ ಆಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದಿನ ಈ ರೆಡ್ಡಿಟ್ ಪೋಸ್ಟ್ ಇದೀಗ ಎಕ್ಸ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಬಾಸ್‌ಗೆ ತಿರುಗೇಟು ನೀಡಲು ಐಡಿಯಾ ಕೇಳಿದ ಉದ್ಯೋಗಿ
ನಾಳೆಯೇ ತನ್ನನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ತಿಳಿದಿದ್ದ ಉದ್ಯೋಗಿಯೊಬ್ಬರು, ಕಂಪನಿಗೆ ತೊಂದರೆ ಉಂಟುಮಾಡಲು ಏನು ಮಾಡಬಹುದು ಎಂದು ರೆಡ್ಡಿಟ್‌ನಲ್ಲಿ ಪ್ರಶ್ನಿಸಿದ್ದರು. ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು @TikTokInvestors ಎಂಬ ಎಕ್ಸ್ ಖಾತೆ ಹಂಚಿಕೊಂಡ ಬಳಿಕ ಹಳೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ವಿಚಿತ್ರ ಸಲಹೆ ನೀಡಿದ ನೆಟ್ಟಿಗರು!
ಉದ್ಯೋಗಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಲವರು ತಮಾಷೆಯ ಹಾಗೂ ವಿಚಿತ್ರ ಸಲಹೆಗಳನ್ನು ನೀಡಿದ್ದಾರೆ. ಕಂಪನಿಯ ಕೋಡ್ ವ್ಯವಸ್ಥೆಯನ್ನು ಹಾಳುಮಾಡುವಂತಹ ಅಪಾಯಕಾರಿ ಐಡಿಯಾಗಳನ್ನೂ ಕೊಟ್ಟಿದ್ದಾರೆ. ಆದರೆ, ಇಂತಹ ಕೃತ್ಯಗಳು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.
ಇನ್ನು ಕೆಲವರು ಕಚೇರಿಗೆ ಕಪ್‌ಕೇಕ್‌ಗಳನ್ನು ತಂದು ಸಹೋದ್ಯೋಗಿಗಳಿಗೆ ಹಂಚುವಂತೆ ಸಲಹೆ ನೀಡಿದರು. ಮತ್ತೊಬ್ಬರು, ಕೆಲಸದಿಂದ ವಜಾಗೊಳ್ಳುವ ಸಾಧ್ಯತೆಯಿದ್ದರೂ ಅತಿಯಾದ ಸಂತೋಷದಿಂದ ವರ್ತಿಸುವುದೇ ಬಾಸ್‌ಗೆ ಅಚ್ಚರಿ ಮೂಡಿಸಬಹುದು ಎಂದು ತಮಾಷೆ ಮಾಡಿದ್ದರು.
ಕೊನೆಗೆ ಉದ್ಯೋಗಿ ತೆಗೆದುಕೊಂಡ ನಿರ್ಧಾರವೇನು?
ಈ ಪೋಸ್ಟ್‌ನಲ್ಲಿ ಉದ್ಯೋಗಿ ನಂತರ ನೀಡಿದ ಅಪ್‌ಡೇಟ್ ಎಲ್ಲರ ಗಮನ ಸೆಳೆಯಿತು. ಕೊನೆಗೂ ತನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಆದರೆ, ಕಂಪನಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬದಲು, ಕಂಪನಿ ನೀಡಿದ ಪರಿಹಾರ ಮೊತ್ತದ ಪ್ಯಾಕೇಜ್ (Severance Package) ಅನ್ನು ಸ್ವೀಕರಿಸಿರೋದಾಗಿ ಹೇಳಿಕೊಂಡಿದ್ದಾರೆ.
ಕುಟುಂಬದ ಹಿತದೃಷ್ಟಿಯಿಂದ ಅನಗತ್ಯ ಗೊಂದಲ ಸೃಷ್ಟಿಸದೆ ಪರಿಹಾರ ಮೊತ್ತವನ್ನು ಸ್ವೀಕರಿಸುವುದೇ ಸೂಕ್ತ ನಿರ್ಧಾರ ಎಂದು ಅವರು ಭಾವಿಸಿದ್ದರು. ಪೋಸ್ಟ್‌ಗೆ ಸಲಹೆ ನೀಡಿದವರಿಗೆ ಧನ್ಯವಾದ ತಿಳಿಸಿ, ಮುಂದಿನ ಜೀವನದಲ್ಲಿ ಇನ್ನಷ್ಟು ಉತ್ತಮ ಅವಕಾಶಗಳನ್ನು ಹುಡುಕುವುದಾಗಿ ಹೇಳಿಕೊಂಡಿದ್ದರು.



