ಹೊಸದಿಗಂತ ವರದಿ ತುಮಕೂರು:
ಎರಡು ಕಾರುಗಳು ಮುಖಾ ಮುಖಿ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಕಳಸಿಪಾಳ್ಯ ಗ್ರಾಮದ ವೀಣಾ (34) ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮಶೇಖರ್ ಹಾಗೂ ಹೆಂಡತಿ ವೀಣಾ ಮತ್ತು ಮಕ್ಕಳು ಕಳಸಿಪಾಳ್ಯ ಗ್ರಾಮದಿಂದ ಚಿಕ್ಕಣ್ಣ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ತುಮಕೂರು ಕುಣಿಗಲ್ ರಸ್ತೆಯ ವಡ್ಡರ ಕುಪ್ಪೆ ಗೇಟ್ ಹತ್ತಿರ ತುಮಕೂರಿನಿಂದ ಬರುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವೀಣಾ ತೀವ್ರವಾಗಿ ಗಾಯಗೊಂಡು ಮೃತಪಟ್ಟರೆ, ಗಂಡ ಸೋಮಶೇಖರ್ ಮತ್ತು ಮಕ್ಕಳು ಸಣ್ಣಪುಟ್ಟ ಗಾಯಗಳಾಗಿ ಸಾವಿನಿಂದ ಪಾರಾಗಿದ್ದಾರೆ.
ಈ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



