ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಕಾನೂನು ಸಮರ ಸಾರಿದ್ದಾರೆ.
ನನ್ನ ಐದು ದಶಕಗಳ ಸಾರ್ವಜನಿಕ ಜೀವನವು ತೆರೆದ ಪುಸ್ತಕದಂತಿದ್ದು, ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡಲು ಹರಡಲಾಗುತ್ತಿರುವ ಈ ನಕಲಿ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದರ ಪ್ರಸಾರಕ್ಕೆ ಕಟ್ಟುನಿಟ್ಟಿನ ತಡೆಯಾಜ್ಞೆ ನೀಡುವಂತೆ ಕೋರಿ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಲಾಖೆಯ ಉನ್ನತ ಮಟ್ಟದ ತನಿಖೆಗಾಗಿ ಅವರು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ಅಧಿಕೃತ ದೂರು ನೀಡಿದ್ದು, ಇಡೀ ಪ್ರಕರಣವು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಪೋಸ್ ಹಂಚಿಕೊಂಡ ಮಾಜಿ ಸಿಎಂ
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಇಡೀ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ಹಾಗೂ ನನ್ನನ್ನು ಹತ್ತಿರದಿಂದ ಬಲ್ಲ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ಸುದೀರ್ಘ ರಾಜಕೀಯ ಜೀವನದ ಅರಿವು ಇರುವ ಕರ್ನಾಟಕದ ಜನತೆಗೂ ಇದು ಗೊತ್ತಿದೆ ಎನ್ನುವ ದೃಢ ವಿಶ್ವಾಸ ನನಗಿದೆ. ಆದರೆ ಇಂದಿನ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿ ಸುಳ್ಳನ್ನು ಅತ್ಯಂತ ಸುಲಭವಾಗಿ ಸತ್ಯದಂತೆ ಬಿಂಬಿಸಿ ಜನರ ದಾರಿ ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ಕೇವಲ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆಯೇ ಹೊರತು ಉಳಿದಂತೆ ನನ್ನ ತೇಜೋವಧೆ ಮಾಡಲು ಹೊರಟಿರುವವರಿಗೆ ಹೆದರುವ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ನ್ಯಾಯ ಮತ್ತು ಸತ್ಯವೇ ಗೆಲ್ಲುತ್ತದೆ ಎನ್ನುವ ಅಚಲವಾದ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗಕ್ಕೆ ವಿಷಾದ
ತಾವು ಎಂದಿಗೂ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದವರಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲುವವನು. ಇಲ್ಲಿಯವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಮತ್ತು ಕಿಡಿಗೇಡಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ಮೀರಿ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಅತಿರೇಕದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ನನ್ನ ಗೌರವ ರಕ್ಷಣೆಗಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬೆಳವಣಿಗೆಯ ಬಗ್ಗೆ ನನಗೆ ವೈಯಕ್ತಿಕವಾಗಿ ತೀವ್ರ ವಿಷಾದವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು, ತನಿಖೆಗೆ ಆಗ್ರಹ
ಈ ಇಡೀ ಸಂಚಿನ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ನಕಲಿ ಸ್ಟಿಂಗ್ ಆಪರೇಷನ್ ವಿಡಿಯೋದ ಬಗ್ಗೆ ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ. ಪಾರದರ್ಶಕ ತನಿಖೆಯ ಮೂಲಕ ಸತ್ಯ ಶೀಘ್ರದಲ್ಲೇ ಹೊರಬರಲಿದ್ದು, ಅಲ್ಲಿಯವರೆಗೆ ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಪೇಜ್‌ಗಳು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಶೇರ್ ಮಾಡದೆ, ಅನಗತ್ಯವಾಗಿ ಅಪಪ್ರಚಾರ ನಡೆಸದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.



