ಹೊಸದಿಗಂತ ವರದಿ ಸೋಮವಾರಪೇಟೆ:
ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿನಿಯೊಬ್ಬರು ಹೋಂಸ್ಟೇಯ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ವಿಷ ಅನಿಲದಿಂದ ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ಸೋಮವಾರಪೇಟೆ ಸಮೀಪದ ಕಲಕಂದೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ವಿನುತಾ (27) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಹೆಲ್ತ್ ಕೇರ್ ಸಲ್ಯೂಷನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಪ್ರವಾಸದ ಅಂಗವಾಗಿ 14 ಸದಸ್ಯರ ತಂಡದೊಂದಿಗೆ ಶನಿವಾರ ಕಲಕಂದೂರಿನ ಖಾಸಗೆ ಹೋಂ ಸ್ಟೇಗೆ ಆಗಮಿಸಿದ್ದರು.
ಭಾನುವಾರ ಬೆಳಿಗ್ಗೆ ವಿನುತಾ ಸ್ನಾನಕ್ಕಾಗಿ ಬಾತ್‌ರೂಮ್‌ಗೆ ತೆರಳಿದ ವೇಳೆ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಸೋರಿಕೆಯಾಗಿದ್ದು, ಇದರಿಂದ ಉಂಟಾದ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿನುತಾ ಅವರು ಮೈಸೂರಿನ ಸಿದ್ಧಾರ್ಥನಗರ ನಿವಾಸಿಗಳಾದ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿಯಾಗಿದ್ದಾರೆ.
ಘಟನೆ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಸುರಕ್ಷತಾ ವ್ಯವಸ್ಥೆಗಳ ಕೊರತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.



