ತಪ್ಪಿತು ದೊಡ್ಡ ದುರಂತ: ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಒಡಿಶಾ ರೈಲು ದುರಂತದ ನೋವಿನಲ್ಲಿರುವಾಗಲೇ ರೈಲ್ವೇ ಟ್ರ್ಯಾಕ್‍ನಲ್ಲಿದ್ದ ಟ್ರಕ್ ಟೈರ್‌ಗೆ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್‌ (Chennai-Kanyakumari Express Train) ರೈಲು ಡಿಕ್ಕಿಯಾದ ಘಟನೆ ತಮಿಳುನಾಡಿನಲ್ಲಿ (Tamil Nadu) ಶನಿವಾರ ನಡೆದಿದೆ.

ಲೋಕೋ ಪೈಲಟ್ ದೂರದಿಂದಲೇ ಎರಡು ಟ್ರಕ್ ಟೈರ್‌ಗಳನ್ನು ರೈಲ್ವೇ ಟ್ರ್ಯಾಕ್‍ನಲ್ಲಿ ಇರುವುದನ್ನು ಗಮನಿಸಿದ್ದು, ಕೂಡಲೇ ರೈಲನ್ನು ಕ್ರಮೇಣ ನಿಧಾನಗೊಳಿಸಿದ್ದಾರೆ. ಆದರೂ ಇಂಜಿನ್ ಮುಂಭಾಗ ಟೈರ್‌ಗೆ ಡಿಕ್ಕಿಯಾಗಿದೆ. ಇದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ (Chennai) ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಮಧ್ಯರಾತ್ರಿ 12:30ರ ಸುಮಾರಿಗೆ ತಿರುಚ್ಚಿಗೆ ಆಗಮಿಸಿತ್ತು. ಲೊಕೋ ಪೈಲಟ್ (Loco Pilot) ರಘುರಾಮನ್ ಮತ್ತು ಸಹಾಯಕ ಲೊಕೋ ಪೈಲಟ್ ವಿನೋದ್ ಎಂಬವರು ರೈಲನ್ನು ಚಲಾಯಿಸುತ್ತಿದ್ದರು. 1:05ರ ಸುಮಾರಿಗೆ ರೈಲು ವಾಲಾಡಿ ನಿಲ್ದಾಣವನ್ನು ದಾಟಿದ ನಂತರ ಲೋಕೋ ಪೈಲಟ್ ಹಳಿಯಲ್ಲಿ ಕಪ್ಪು ವಸ್ತು ಇರುವುದನ್ನು ಗಮನಿಸಿ ಬ್ರೇಕ್ ಹಾಕಿದ್ದಾರೆ.ಬಳಿಕ ಎರಡು ದೊಡ್ಡ ಟೈರ್‌ಗಳನ್ನು ಒಂದರ ಮೇಲೊಂದು ಹಾಕಿರುವುದು ಅವರ ಅರಿವಿಗೆ ಬಂದಿದೆ. ಟೈರ್‌ಗೆ ಡಿಕ್ಕಿಯಾಗಿ ರೈಲು ಸ್ವಲ್ಪ ದೂರದಲ್ಲಿ ನಿಂತಿದೆ. ಈ ವೇಳೆ ಒಂದು ಟೈರ್ ಇಂಜಿನ್‍ಗೆ ಸಿಕ್ಕಿಹಾಕಿಕೊಂಡಿತು. ಇದರಿಂದಾಗಿ ರೈಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಕ್ಷಣ ಲೋಕೋ ಪೈಲಟ್ ಸಮೀಪದ ವಾಲಾಡಿ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದುರಸ್ತಿಯಾದ ನಂತರ ರೈಲು ಅಲ್ಲಿಂದ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧ್ವಂಸಕ ಕೃತ್ಯ ಎಸಗಲು ಕೆಲ ದುಷ್ಕರ್ಮಿಗಳು ಟ್ರಕ್‍ನ ಟೈರ್‌ಗಳನ್ನು ಹಳಿಗಳ ಮೇಲೆ ಇಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೈಲ್ವೆ ಪೊಲೀಸರು (Railway Police) ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.‌

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!