ಅಮೆರಿಕದ ಕಾನೂನು ಶಾಲೆಯ ಪರೀಕ್ಷೆ ಪಾಸ್‌ ಮಾಡಿದ ಚಾಟ್‌ಜಿಪಿಟಿ ಬೋಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ವಿಶಿಷ್ಟವಾದ ಮೇಧಾ ಶಕ್ತಿಯಿಂದ ಮಾನವ ಇತರ ಪ್ರಾಣಿಗಳಿಗಿಂತ ಭಿನ್ನ ಆತ ತನ್ನ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಸೃಷ್ಟಿಸಿಕೊಳ್ಳಬಲ್ಲ. ಇದೇ ಕಾರಣದಿಂದಾಗಿ ಇಂದು ತಂತ್ರಜ್ಞಾನ ರೂಪದಲ್ಲಿ ಅದೆಷ್ಟೊ ಆವಿಷ್ಕಾರಗಳನ್ನು ಮಾನವ ಮಾಡಿದ್ದಾನೆ. ಅಂಥಹ ಮಾನವ ಆವಿಷ್ಕಾರಗಳಲ್ಲೊಂದು ಈಗ ಮಾನವ ಯೋಚನೆಗೆ ಸರಿಸಮನಾಗಿ ಯೋಚಿಸಬಲ್ಲ ಮಟ್ಟಕ್ಕೆ ತಲುಪಿದೆ. ಮಾನವರು ಬರೆಯುವ ಪರೀಕ್ಷೆಯಲ್ಲಿ ಮಾನವ ನಿರ್ಮಿತ ತಂತ್ರಜ್ಞಾನವೊಂದು ತಾನೇ ಯೋಚಿಸಿ ಉತ್ತರ ಬರೆದು ಪರೀಕ್ಷೆಯಲ್ಲಿಉತ್ತೀರ್ಣವಾಗಿದೆ. ಆ ತಂತ್ರಜ್ಞಾನವೇ ಚಾಟ್‌ ಜಿಪಿಟಿ.

ಇಂದು ಈ ಚಾಟ್‌ ಜಿಪಿಟಿ ಆವಿಷ್ಕಾರದ ಬಗ್ಗೆ ಜಗತ್ತಿನಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಯಾಂತ್ರಿಕೃತ ವ್ಯವಸ್ಥೆಯಾದ ಈ ಚಾಟ್‌ ಜಿಪಿಟಿ ಬೋಟ್‌ ಇದೀಗ ಅಮೆರಿಕದ ಕಾನೂನು ಶಾಲೆಯೊಂದರ ಪರೀಕ್ಷೆಯನ್ನು ಸ್ವತಃ ಬರೆದು ಉತ್ತೀರ್ಣವಾಗಿದೆ. ಇದರ ಬಗ್ಗೆ ಸಂಕ್ಷೇಪವಾಗಿ ಹೇಳಬೇಕೆಂದರೆ ಚಾಟ್‌ಜಿಪಿಟಿ ಎಂಬುದು ಕೃತಕಬುದ್ಧಿಮತ್ತೆಯ ವಿಷಯದಲ್ಲ ಕಾರ್ಯನಿರ್ವಹಿಸುವ ಓಪನ್‌ ಎಐ (Open AI) ಎಂಬ ಹೆಸರಿನ ಅಮರಿಕದ ಕಂಪನಿಯೊಂದರ ಆವಿಷ್ಕಾರವಾಗಿದ್ದು ತನ್ನಲ್ಲಿ ತುಂಬಿಸಿರುವ ಮಾಹಿತಿಯನ್ನಾಧರಿಸಿ ಯಾವುದೇ ಮಾನವ ಸಹಾಯವಿಲ್ಲದೇ ತಾನೇ ಸ್ವತಃ ಯೋಚಿಸಿ ಉತ್ತರ ನೀಡಬಲ್ಲ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಯಾವುದೋ ವಿಷಯದ ಬಗ್ಗೆ ಕತೆಯೋ ಕವನವೋ ಅಥವಾ ಪ್ರಬಂಧವೋ ಬೇಕು ಎಂದರೆ ತಾನೇ ಯೋಚಿಸಿ ಇದು ರಚಿಸಿಕೊಡುತ್ತದೆ. ಪ್ರಸ್ತುತ ಪರೀಕ್ಷೆಯಲ್ಲಿ ಈ ಯಾಂತ್ರೀಕೃತ ಚಾಟ್‌ಬೋಟ್‌ ನೀಡಿರುವ ಉತ್ತರಗಳು ಅತ್ಯಂತ ಸ್ಪಷ್ಟ ಹಾಗು ನಿಖರವಾಗಿರುವುದು ಜನರನ್ನು ನಿಬ್ಬೆರಗಾಗಿಸಿದೆ.

ಮಿನ್ನೇಸೋಟ ವಿಶ್ವವಿದ್ಯಾನಿಲಯದ ಕಾನೂನು ಶಾಲೆಯ ಪ್ರಾಧ್ಯಾಪಕರಾದ ಜೊನಾಥನ್ ಚೋಯ್ ಅವರು 95 ಬಹು ಆಯ್ಕೆಯ ಪ್ರಶ್ನೆಗಳು ಮತ್ತು 12 ಪ್ರಬಂಧ ಪ್ರಶ್ನೆಗಳನ್ನು ಒಳಗೊಂಡಿರುವ ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆ ಪತ್ರಿಕೆಯೊಂದನ್ನು ಚಾಟ್‌ಜಿಪಿಟಿ ಬೋಟ್‌ ಗೆ ನೀಡಿದ್ದರು. ಇದರಲ್ಲಿ ಬಹುತೇಕ ಬಹುಆಯ್ಕೆ ಪ್ರಶ್ನೆಗಳಿಗೆ ಚಾಟ್‌ಜಿಪಿಟಿ ಬಾಟ್‌ ಅತ್ಯಂತ ನಿಖರ ಉತ್ತರಗಳನ್ನು ನೀಡಿದೆ. ಅಲ್ಲದೇ ಅಮೆರಿಕದ ಕಾನೂನಿನ ಕುರಿತಾದ ನಿಬಂಧಗಳನ್ನು ಇದು ಬರೆದಿದ್ದು ಸ್ಪಷ್ಟವಾಗಿ ಕಾನೂನಿನ ಉಲ್ಲೇಖಗಳನ್ನು ಮಾಡಿದೆ ಎಂದು ಜೋನಾಥನ್‌ ಚೋಯ್‌ ಹೇಳಿದ್ದಾರೆ. ಒಟ್ಟಾರೆ ಉತ್ತೀರ್ಣವಾಗಲು ಅಗತ್ಯವಿರುವ ಅಂಕಗಳನ್ನು ಈ ಚಾಟ್‌ಬೋಟ್‌ ಗಳಿಸಿಲ್ಲವಾದರೂ ಇದು ನೀಡಿರುವ ಉತ್ತರಗಳು ಬಹಳ ಉತ್ತಮವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ಪರೀಕ್ಷೆಯಲ್ಲಿ ವಂಚನೆ ಹಾಗು ಪ್ರಸ್ತುತ ಜಗತ್ತಿನಲ್ಲಿ ರೂಢಿಯಲ್ಲಿರುವ ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕೆ ಸಂಕಷ್ಟತರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ನ್ಯೂಯಾರ್ಕ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ ಶಾಲೆಗಳಲ್ಲಿ ಚಾಟ್‌ಜಿಪಿಟಿ ಬಳಸುವುದನ್ನು ನಿಷೇಧಿಸಲಾಗಿದೆ. ಪ್ರಸ್ತುತ ಈ ವ್ಯವಸ್ಥೆಯೂ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು ಸಂಪೂರ್ಣ ಅಭಿವೃದ್ಧಿಯ ನಂತರ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!