ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನುಮತಿ ಇಲ್ಲದೆ ಹಾಡುಗಳನ್ನು ಬಳಸಿದ ಆರೋಪದ ಮೇಲೆ ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ‘ಗಾಳಿಮಾತು’ ಹಾಗೂ ‘ನ್ಯಾಯ ಎಲ್ಲಿದೆ’ ಎಂಬ ಹಾಡುಗಳನ್ನು ಅನುಮತಿ ಇಲ್ಲದೇ ಕದ್ದಿರುವ ಆರೋಪ ಕೇಳಿಬಂದಿದೆ.
ಈ ಹಿಂದೆ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಇದೇ ರೀತಿಯ ಕಾಪಿ ರೈಟ್ಸ್ ಸಮಸ್ಯೆ ಎದುರಾಗಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಟ್ಯೂನ್ ಬಳಸಿಕೊಂಡಿದ್ದಕ್ಕೆ ಲಹರಿ ವೇಲು ಕೋರ್ಟ್ ಮೆಟ್ಟಿಲೇರಿದ್ದರು. ವಿವಾದ ಭಾರೀ ಸದ್ದು ಮಾಡಿತ್ತು. ಕೊನೆಗೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿತ್ತು. ಇದೀಗ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ವಿಚಾರದಲ್ಲಿ ರಕ್ಷಿತ್ ಶೆಟ್ಟಿಗೆ ಇದೇ ಸಂಕಷ್ಟ ಎದುರಾಗಿದೆ.
ಅಭಿಜಿತ್ ಮಹೇಶ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ‘ಬ್ಯಾಚುಲರ್ ಪಾರ್ಟಿ’ ಇದೇ ವರ್ಷ ಜನವರಿ 26ಕ್ಕೆ ತೆರಕಂಡಿತ್ತು. ದಿಗಂತ್, ಅಚ್ಯುತ್ ಕುಮಾರ್ ಹಾಗೂ ಲೂಸ್ ಮಾದ ಯೋಗಿ ಚಿತ್ರದಲ್ಲಿ ತಾರಾಗಣದಲ್ಲಿದ್ದರು. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದರು. ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿದ್ದರು.
ಕಾಪಿರೈಟ್ ಉಲ್ಲಂಘನೆ ಆರೋಪದಡಿ ರಕ್ಷಿತ್ ಶೆಟ್ಟಿ ಹಾಗೂ ಪರಂವಃ ಸ್ಟುಡಿಯೋಸ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರು ಆಧರಿಸಿ ಈಗಾಗಲೇ ಪೊಲೀಸರು ಎಫ್‌ಐಆರ್ ಹಾಕಿದ್ದಾರೆ. ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ಇದೀಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ಗಾಳಿ ಮಾತು’ ಚಿತ್ರದ ಒಮ್ಮೆ ‘ನಿನ್ನನ್ನು ಕಣ್ತುಂಬ’ ಹಾಗೂ ‘ನ್ಯಾಯ ಎಲ್ಲಿದೆ’ ಚಿತ್ರದ ಟೈಟಲ್ ಸಾಂಗ್ ಬಳಸಿಕೊಂಡಿರುವ ಬಗ್ಗೆ ಚಕಾರ ಎತ್ತಿದ್ದಾರೆ.