ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪಥನಾಂತಿಟ್ಟ ಪ್ರದೇಶದ ಪಲ್ಲಿಕಲ್ ಎಂಬ ಶಾಂತ ಗ್ರಾಮದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಪಕ್ಕದ ಮನೆಯ ಕೋಳಿ ದಿನವೂ ಮುಂಜಾನೆ ಕೂಗಿ ತಮ್ಮ ನಿದ್ರೆಗೆ ಭಂಗ ತರುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಗಿದ್ರೆ ಅಷ್ಟಕ್ಕೂ ಒಂದು ಕೋಳಿಗಾಗಿ ಇಷ್ಟೆಲ್ಲಾ ಹೋರಾಟ ನಡೆದಿದ್ದು ಏಕೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಈ ಗ್ರಾಮದಲ್ಲಿ ಆಸ್ತಿ ಅಥವಾ ಇತರ ಯಾವುದಕ್ಕಾಗಿಯೂ ಅಲ್ಲ, ಬದಲಾಗಿ ಕೋಳಿ ಕೂಗಿಗಾಗಿ ಜಗಳ ಶುರುವಾಗಿದೆ. ರಾಧಾಕೃಷ್ಣ ಕುರುಪ್ ಎಂಬ ವೃದ್ಧನಿಗೆ ಚೆನ್ನಾಗಿ ನಿದ್ರೆ ಮಾಡಲು ಆಗುತ್ತಿಲ್ಲ, ಇದಕ್ಕೆ ಕಾರಣ ಕೋಳಿ ಎಂದು ಹೇಳಿದ್ದಾರೆ. ಆದ್ದರಿಂದ ನಿದ್ರೆಗೆ ಭಂಗ ತರುತ್ತಿದ್ದ ಕೋಳಿ ವಿರುದ್ಧವೇ ಇದೀಗ ರಾಧಾಕೃಷ್ಣ ಕುರುಪ್ ಅವರು ದೂರು ದಾಖಲಿಸಿದ್ದಾರೆ.
ರಾಧಾಕೃಷ್ಣ ಕುರುಪ್ ಎಂಬ ವೃದ್ಧರಿಗೆ ಕೋಳಿ ಕೂಗಿನಿಂದಾಗಿ ಕಿರಿಕಿರಿ ಉಂಟಾಗಿದೆ. ಇದರಿಂದ ತುಂಬಾನೇ ತೊಂದರೆಗೀಡಾಗಿದ್ದರು. ಆದ್ದರಿಂದ ರಾಧಾಕೃಷ್ಣ ಅವರಿಗೆ ದೂರು ನೀಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇದೇ ಕಾರಣದಿಂದ ರಾಧಾಕೃಷ್ಣ, ಪಕ್ಕದಮನೆಯ ಕೋಳಿ ವಿರುದ್ಧ ಆಡೂರು ಕಂದಾಯ ವಿಭಾಗೀಯ ಕಚೇರಿ (RDO)ಗೆ ತಮ್ಮ ದೂರನ್ನು ನೀಡಿದ್ದರು.
ಇನ್ನು ದೂರಿನಲ್ಲಿ ಪ್ರತಿದಿನ ಮುಂಜಾನೆ 3 ಗಂಟೆ ಹೊತ್ತಿಗೆ ಪಕ್ಕದ ಮನೆಯ ಕೋಳಿ ನಿರಂತರವಾಗಿ ಕೂಗುತ್ತವೆ. ಇದರಿಂದಾಗಿ ತನ್ನ ನಿದ್ರೆಗೂ ಭಂಗ ಉಂಟಾಗಿದೆ. ಶಾಂತಿಯುತ ಜೀವನಕ್ಕಾಗಿ ಕೋಳಿ ಕೂಗು ತುಂಬಾನೇ ಕಿರಿಕಿರಿ ಮಾಡುತ್ತಿದ್ದರಿಂದ ಮತ್ತು ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದರಿಂದ ಕುರುಪ್ ದೂರನ್ನು ಅಧಿಕಾರಿಗಳು ಸಹ ಗಂಭೀರವಾಗಿ ಪರಿಗಣಿಸಿದರು.
ದೂರು ದಾಖಲಾಗುತ್ತಿದ್ದಂತೆ RDO ಅಧಿಕಾರಿಗಳು ತಕ್ಷಣ ತನಿಖೆ ಆರಂಭಿಸಿದ್ದಾರೆ. ಬಳಿಕ ಚರ್ಚೆಗಾಗಿ ರಾಧಾಕೃಷ್ಣ ಕುರುಪ್ ಮತ್ತು ಅನಿಲ್ ಕುಮಾರ್ ಇಬ್ಬರನ್ನೂ ಕರೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಕುರುಪ್ ನೆರೆಹೊರೆಯವರು ಮನೆಯ ಮೇಲಿನ ಮಹಡಿಯಲ್ಲಿ ಕೋಳಿ ಸಾಕಿರುವುದು ತಿಳಿದುಬಂದಿದೆ. ಅಲ್ಲದೇ ಸ್ಥಳ ಪರಿಶೀಲನೆ ವೇಳೆ ಕುರುಪ್ ಕೋಳಿಯ ಕೂಗಿನಿಂದ ನಿವಾಗಿಯೂ ತೊಂದರೆ ಅನುಭವಿಸಿದ್ದಾರೆ ಎಂದು ಕಂಡುಕೊಂಡಿದ್ದಾರೆ. ತನಿಖೆ ಬಳಿಕ RDO ಅಧಿಕಾರಿಗಳು ವಿವಾದವನ್ನು ಬಗೆಹರಿಸಲು ಕೋಳಿ ಶೆಡ್ ಅನ್ನು ಮೇಲಿನ ಮಹಡಿಯಿಂದ ಮನೆಯ ಅಂಗಳದ ಪಕ್ಕಕ್ಕೆ ಸ್ಥಳಾಂತರಿಸುವಂತೆ ರಾಧಾಕೃಷ್ಣ ಅವರ ನೆರೆಹೊರೆಯವರಿಗೆ ಸೂಚಿಸಿದ್ದಾರೆ.