ಶಿವ ಪಾರ್ವತಿಯರ ವೇಷಹಾಕಿ ಪ್ರತಿಭಟಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ದಾಖಲಾಯ್ತು ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಲೀನಾ ಮಣಿಮೇಕಲೈ ಅವರ ಕಾಳಿ ಧೂಮಪಾನ ಮಾಡುತ್ತಿರುವ ಪೋಸ್ಟರ್‌ಗೆ ದೇಶವ್ಯಾಪಿ ಆಕ್ರೋಶದ ನಡುವೆ, ಅಸ್ಸಾಂನ ನಾಗಾಂವ್‌ ನಲ್ಲಿ ಶಿವ ಪಾರ್ವತಿಯರ ವೇಷಧರಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಹೊಸವಿವಾದ ಭುಗಿಲೆದ್ದಿದೆ. ಈ ಘಟನೆಯು ಹಿಂದೂ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ನಾಗಾವ್ ಜಿಲ್ಲಾ ಘಟಕಗಳು ತೀವ್ರವಾಗಿ ಖಂಡಿಸಿವೆ.

ಏನಿದು ಘಟನೆ ?
ನಾಗಾಂವ್‌ ನ ಪುರುಷ ಮತ್ತು ಮಹಿಳೆಯಿಬ್ಬರೂ ಶಿವ ಪಾರ್ವತಿಯ ವೇಷ ಹಾಕಿ ರಸ್ತೆಗಿಳಿದು ಇಂಧನ, ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು. ಇಬ್ಬರೂ ಬೈಕ್‌ನಲ್ಲಿ ನಾಗಾವ್‌ನ ಕಾಲೇಜು ಚೌಕ್‌ಗೆ ಆಗಮಿಸಿ ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ನಾಟಕವಾಡಿದ್ದಾರೆ.

ಶಿವನ ವೇಷ ಧರಿಸಿದ ನಟ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡು ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದ್ದಾನೆ. ಹೀಗೆ ಇನ್ನೂ ಕೆಲವು ಕಡೆಗಳಲ್ಲಿ ಇದೇ ರೀತಿಯ ನಾಟಕ ಪ್ರದರ್ಶಿಸಿದ್ದಾರೆ. ಇದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಗಳು ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಶಿವ ಪಾರ್ವತಿಯ ವೇಷ ಹಾಕಿ ಹಿಂದೂಗಳ ಭಾವನೆಗೆ ಘಾಸಿಗೊಳಿಸಿದ್ದಾರೆ ಎಂದು ನಟನೆ ಮಾಡಿದ ಬಿರಿಂಚಿ ಬೋರಾ ಮತ್ತು ಕರಿಷ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!