ಶ್ರೀರಾಮಲಲಾ ಪ್ರಾಣ ಪ್ರತಿಷ್ಠಾಪನೆ ದಿನ ಮಗುವಿಗೆ ‘ಶ್ರೀರಾಮ’ ಎಂದು ಹೆಸರಿಟ್ಟ ಕೋಟೆನಾಡಿನ ದಂಪತಿ

ಹೊಸದಿಗಂತ ವರದಿ, ಚಿತ್ರದುರ್ಗ:

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವಾದ ಸೋಮವಾರ ವಿಶ್ವದೆಲ್ಲೆಡೆ ಶ್ರೀರಾಮಮಂತ್ರ ಪಠಿಸಲಾಯಿತು. ಇಂತಹ ಅಪೂರ್ವ ಸಂದರ್ಭವನ್ನು ಬಳಸಿಕೊಂಡ ಕೋಟೆನಾಡು ಚಿತ್ರದುರ್ಗದ ದಂಪತಿ ತಮ್ಮ ಪುಟ್ಟ ಕಂದನಿಗೆ ’ಶ್ರೀರಾಮ’ ಎಂದು ನಾಮಕರಣ ಮಾಡುವ ಮೂಲಕ ಈ ದಿನವನ್ನು ತಮ್ಮ ಜೀವನದ ಅವಿಸ್ಮರಣೀಯ ದಿನವನ್ನಾಗಿ ಮಾಡಿಕೊಂಡಿದ್ದಾರೆ.

ದೇಶದ ಬಹುಸಂಖ್ಯಾತ ಜನರ ಎಷ್ಟೋ ವರ್ಷಗಳ ಕನಸಾಗಿರುವ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸೋಮವಾರ ನೆರವೇರಿತು. ಇದು ಇಡೀ ದೇಶಕ್ಕೆ ತುಂಬಾ ಶ್ರೇಷ್ಠವಾದ ದಿನ. ಈ ಸಂದರ್ಭದಲ್ಲಿ ಚಿತ್ರದುರ್ಗದ ಗಾಂಧಿನಗರ ಬಡಾವಣೆಯ ನಿವಾಸಿಗಳಾದ ಸಾಗರ್ ಹಾಗೂ ಭಾವನಾ ಅವರು ತಮ್ಮ ಪುತ್ರನಿಗೆ ಶ್ರೀರಾಮ ಎಂದು ನಾಮಕರಣ ಮಾಡಿದ್ದಾರೆ.

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಯವಾದ ೧೨ ಗಂಟೆ ೩೦ ನಿಮಿಷ ೩೨ ಸೆಕೆಂಡುಗಳ ಸಮಯದಲ್ಲೇ ಸಾಗರ್, ಭಾವನಾ ತಮ್ಮ ಪುತ್ರನಿಗೆ ಶ್ರೀರಾಮ ಎಂದು ನಾಮಕರಣ ಮಾಡಿದರು. ಮರ್ಯಾದ ಪುರುಷ ಶ್ರೀರಾಮಚಂದ್ರನ ಹೆಸರನ್ನು ಮಗನಿಗೆ ಇಟ್ಟಿರುವ ಕುರಿತು ಸಂತಸ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಪುಟ್ಟ ಕಂದನ ತಾಯಿ ಭಾವನ, ಇಂದು ಇಡೀ ದೇಶಕ್ಕೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ದಿನ ಬಿಟ್ಟರೆ ಮುಂದೆ ಇಂತಹ ದಿನ ಮತ್ತೆ ಸಿಗುವುದಿಲ್ಲ. ಹಾಗಾಗಿಯೇ ನನ್ನ ಮಗನಿಗೆ ’ಶ್ರೀರಾಮ’ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲು ದಿನಾಂಕ ಘೋಷಣೆಯಾದ ದಿನವೇ ನಾವು ಸೇರಿದಂತೆ
ಕುಟುಂಬಸ್ಥರೆಲ್ಲರೂ ಅದೇ ಸಮಯದಲ್ಲೇ ನಮ್ಮ ಕಂದನಿಗೆ ಶ್ರೀರಾಮ ಎಂದು ನಾಮಕರಣ ಮಾಡಲು ಉತ್ಸುಕರಾಗಿ ಸಜ್ಜಾಗಿದ್ದೆವು. ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುತ್ತಿದೆ. ಇಂತಹ ಪುಣ್ಯದಿನ ನಮ್ಮ ಮಗುವಿಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!