ಹೊಸದಿಗಂತ ವರದಿ, ರಾಯಚೂರು :
ನಾಗಮಂಗಲ, ಮಂಗಳೂರು ಸೇರಿದಂತೆ ಇತರೆಡೆಗಳಲ್ಲಿ ನಡೆದಿರುವ ಘಟನೆಗಳಿಗೆ ಬಿಜೆಪಿಯವರು ಜಾತಿ, ಧರ್ಮದ ಹಾಗೂ ಕೋಮು ಸಂಘರ್ಷದ ಬಣ್ಣ ಬಳಿಯುತ್ತಿದ್ದಾರೆ. ಎಲ್ಲೋ ಒಂದೆರಡು ಕಡೆಗಳಲ್ಲಿ ಇಂತಹ ಘಟನೆಗಳು ನಡೆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದರ್ಥವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಘಟನೆಗಳನ್ನು ಮುಂದಿಟ್ಟುಕೊoಡು ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸವನ್ನು ಮಾಡುವ ಮೂಲಕ ಕೋಮು ಸಂಘರ್ಷ ಸೃಷ್ಠಿ ಮಾಡುತ್ತಿದೆ ಬಿಜೆಪಿ. ಪ್ಯಾಲಿಸ್ತೇನ್ ಧ್ವಜವನ್ನು ಯಾರು ಹಿಡಿದಿದ್ದಾರೋ ಅವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತದೆ. ಈ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದರ್ಥವಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದೆ ಎಂದರು ಹೇಳಿದರು.
ನಾಗಮಂಗಲ ಘಟನೆಯಲ್ಲಿ ಪೆಟ್ರೋಲ್ ಬಾಂಬ್ ಬಳಕೆ ಮಾಡಿಕೊಳ್ಳಲಾಗಿದೆ. ಪ್ಯಾಲೆಸ್ತೇನ್ ಧ್ವಜವನ್ನು ಪ್ರದರ್ಶಿಸಲಾಗಿದೆ ಇವೆನ್ನೆಲ್ಲ ಗಮನಿಸಿದರೆ ರಾಜ್ಯ ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಲಾಗದು. ಈ ಹಿಂದೆ ಇದ್ದವರನ್ನು ಬಂಧಿಸಲಾಗಿದೆ. ಕಾನೂನು ಕಾಪಾಡುವಲ್ಲಿ ಬಿಗಿ ಆಗಿದ್ದೇವೆ ಅಂತಲೇ ಬಿಜೆಪಿಯವರು ಇಂತಹ ಘಟನೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಕೇರಳದವರು ಮತ್ತು ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪಗಳು ಪೊಲೀಸ್ ತನಿಖೆಯಿಂದ ತಿಳಿಯುತ್ತದೆ. ಇದರಲ್ಲಿ ಯಾರು ಭಾಗಿ ಆಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿಯುತ್ತದೆ. ಎನ್ ಐಎಗೆ ವಹಿಸುವ ಅವಶ್ಯಕತೆ ಇಲ್ಲ ಎಂದರು.
ಕಳೆದ ಸರ್ಕಾರದ ನಡೆದ ಶೇ.೪೦ ಭ್ರಷ್ಟಾಚಾರದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿನ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಇದರಿಂದ ಇಬ್ಬರು ಮಕ್ಕಳ ಪ್ರಾಣ ಹೋಗಿದೆ. ಇದು ನೂವಿನ ಸಂಗತಿ. ಈಗ ಈ ಭಾಗದ ಒಂದು ರಸ್ತೆ ಅಭಿವೃದ್ಧಿಗೆ ೧೬೦೦ ಕೋಟಿ ರೂಗಳನ್ನು ನೀಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಂದ ನಾವು ನೀತಿ ಪಾಠಗಳನ್ನು ಕಲಿಯಬೇಕಾಗಿಲ್ಲ. ಆ ಕುರಿತು ಹೇಳುವುದಕ್ಕೆ ಅವರಿಗೆ ಆ ನೈತಿಕತೆಯೂ ಇಲ್ಲ. ಅವರು ಮಾಡಿದಂತಹ ಭ್ರಷ್ಟಾಚಾರಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಿತ್ತು ಎನ್ನುವುದನ್ನು ಯಾರೂ ಮರೆಯಬಾರದು. ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಮುನಿರತ್ನ ಅವರ ಮೇಲೆ ಪ್ರಕರಣ ಆದ ಮೇಲೆ ಅವರನ್ನು ಬಂಧಿಸಲಾಗಿದೆ. ಆದರೆ, ಕಾಂಗ್ರೆಸ್ಸಿನ ಚನ್ನಾರಡ್ಡಿ ಅವರ ಮೇಲೂ ಜಾತಿ ನಿಂದನೆ ಪ್ರಕರಣವಿದ್ದರೂ ಅವರನ್ನು ಸರ್ಕಾರ ಬಂಧಿಸಲು ಮುಂದಾಗದೇ ಅವರ ರಕ್ಷಣೆಯನ್ನು ಮಾಡುತ್ತಿದೆ ಎಂದು ಬಿಜೆಪಿಯವರ ಆರೋಪ ಸತ್ಯಕ್ಕೆ ದೂರವಾದುದು. ಪೊಲೀಸರು ಮಾಡುವ ಕಾನೂನಾತ್ಮಕ ಕೆಲಸಗಳಿಗೆ ನಾನು ಸ್ಪಷ್ಟನೆ ನೀಡುವುದು ಸೂಕ್ತವಲ್ಲ. ಈಗೇನಾದರೂ ನಾನು ಹೇಳಿದರೆ ಅದು ಅವರ ತನಿಖೆಗೆ ವ್ಯತಿರಿಕ್ತವಾಗುತ್ತದೆ ಎನ್ನುವ ಮೂಲಕ ಸರ್ಕಾರ ಚನ್ನಾರಡ್ಡಿ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ಸ್ಪಷ್ಟನೆ ನೀಡದೇ ಸಚಿವರು ನುಣುಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕ ಬಸನಗೌಡ ದದ್ದಲ್, ವಿಪ ಸದಸ್ಯ ಎ.ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ.ಕೆ., ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೇರಿದಂತೆ ಇತರರಿದ್ದರು.