ಹೊಸದಿಗಂತ ವರದಿ ಬೆಳಗಾವಿ:
ಹಸೆಮಣೆ ಏರಿದ್ದ ತನ್ನ ಪ್ರೇಯಸಿಯ ಬದುಕಿಗೆ ಹುಚ್ಚು ಪ್ರೇಮಿಯೊಬ್ಬ ಕೊಳ್ಳಿ ಇಟ್ಟ ಘಟನೆಯೊಂದು ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ನಡೆದಿದೆ.
ವಿವಾಹವಾದ ಮರುದಿನವೇ ಆಕೆಯ ಗಂಡನ ಸಂಬಂಧಿಗೆ ಖಾಸಗಿ ವಿಡಿಯೋ ಹಾಗೂ ಫೋಟೋ ಶೇರ್ ಮಾಡುವ ಮೂಲಕ ಯುವತಿ ಬದುಕು ಮೂರಾಬಟ್ಟೆ ಮಾಡಿರುವ ಆರೋಪಿ ಈಗ ಪರಾರಿಯಾಗಿದ್ದು, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ಪಟ್ಟಣದ ನೇಕಾರ ಕಾಲೊನಿ ನಿವಾಸಿ ಮುತ್ತುರಾಜ ಇಟಗಿ ಎಂಬಾಂತನೇ ಈ ಹುಚ್ಚಾಟ ಮೆರೆದ ಕಿರಾತಕನಾಗಿದ್ದು, ಯುವತಿ ಪಾಲಿಗೆ ಅವನೂ ಇಲ್ಲಾ, ಇವನೂ ಇಲ್ಲ, ಕರಿಮಣಿ ಮಾಲಿಕನೂ ಇಲ್ಲದಂತಹ ಸ್ಥಿತಿ ಬಂದೊದಗಿದೆ.
ಈ ಕಿರಾತಕ ಮುತ್ತುರಾಜ ತನ್ನ ಪಕ್ಕದ ಮನೆಯ ಈ ನತದೃಷ್ಟ ಯುವತಿಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ. ಅಲ್ಲದೇ ಆರು ವರ್ಷಗಳ ಕಾಲ ಅಲ್ಲಿಲ್ಲಿ ಓಡಾಡಿದ್ದ. ಅಷ್ಟೇ ಏಕೆ, ಆಕೆಯೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ. ಆದರೆ, ಮದುವೆ ವಿಚಾರ ಬಂದಾಗ, ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ. ಬೇರೆ ಯಾರನ್ನಾದರೂ ಮದುವೆ ಆಗು ಅಂತಾ ಕೈಕೊಟ್ಟಿದ್ದಾನೆ.
ಹೀಗಾಗಿ, ಪಾಲಕರು ತೋರಿಸಿದ ಯುವಕನನ್ನು ಒಪ್ಪಿ ಮದುವೆಗೆ ಮುಂದಾಗಿದ್ದಾಳೆ. ಅದರಂತೆ ಪಾಲಕರೂ ಕೂಡ ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆ ಆದ ಮರುದಿನವೇ ಮದುವೆಯಾದ ಯುವಕನ ಸಂಬಂಧಿ ಒಬ್ಬರಿಗೆ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುವ ಮೂಲಕ ಆವಾಂತರ ಸೃಷ್ಟಿ ಮಾಡಿದ್ದಾನೆ. ಮದುವೆ ಆದ ಯುವಕ ಹಾಗೂ ಆತನ ಮನೆಯವರು ದಿಢೀರ್ ನೆ ಯುವತಿಯನ್ನು ಆಕೆಯ ತವರು ಮನೆಗೆ ಕಳುಹಿಸಿ ಸಂಬಂಧ ಮುರಿದುಕೊಂಡಿದ್ದಾರೆ.
ಈ ಘಟನೆಯಿಂದ ಕಂಗಾಲಾದ ಯುವತಿ ಪಾಲಕರು, ಸಂಬಂಧಿಕರು ಹಾಗೂ ಊರಿನವರು ಸೇರಿ ನ್ಯಾಯಕ್ಕಾಗಿ ಆರೋಪಿ ಮುತ್ತುರಾಜನ ಮನೆ ಎದುರು ರಾತ್ರಿಯಿಡಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳದ ಕಿತ್ತೂರು ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಶುಕ್ರವಾರ ಮುಂಜಾನೆ ಪ್ರಕರಣ ದಾಖಲಾಗಿದೆ. ತನ್ನ ನೂತನ ಮನೆಯ ಗೃಹ ಪ್ರವೇಶ ಇದ್ದರೂ ಕೂಡ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಸಹಿತ ಏಂಟು ಜನರ ವಿರುದ್ಧ ಸಂತ್ರಸ್ತೆ ಯುವತಿಯಿಂದ ದೂರು ದಾಖಲಾಗಿದೆ. ಮುತ್ತುರಾಜ್ ತಂದೆ ಬಸವರಾಜ್, ತಾಯಿ ನಾಗರತ್ನಾ, ಸಹೋದರಿಯರಾದ ಚನ್ನಮ್ಮ, ಲತಾ, ಶಿವಲೀಲಾ, ಹೇಮಾ, ನೇತ್ರಾ ವಿರುದ್ಧ ಸೆಕ್ಷನ್ 143, 147, 417, 376, 323, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅತ್ಯಾಚಾರ, ಮಾನಹಾನಿ, ಖಾಸಗಿ ಫೋಟೊ ವೈರಲ್ ಸೇರಿದಂತೆ ಇತರ ಪ್ರಕರಣಗಳನ್ನು ದೂರು ನೀಡಿದ್ದಾರೆ.