ವರುಣಾದಲ್ಲಿಯೂ ಸಿದ್ದರಾಮಯ್ಯನವರಿಗೆ ಹೀನಾಯ ಸೋಲು ಖಚಿತ: ತೋಟದಪ್ಪ ಬಸವರಾಜು

ಹೊಸದಿಗಂತ ವರದಿ,ಮೈಸೂರು:

ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗೆಲ್ಲಿಸಲೆಂದು ಕಾಂಗ್ರೆಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ವರುಣಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ತಿಳಿಸಿದ್ದಾರೆ.
ಈ ಬಗ್ಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ರೋಡ್ ಶೋನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಅಲ್ಲಗೆಳೆದಿದ್ದಾರೆ.
2013 ಹಾಗೂ 2018 ರಲ್ಲಿ ವರುಣಾ ಕ್ಷೇತ್ರದಕ್ಕೆ ನಡೆದ ಚುನಾವಣೆಯ ವೇಳೆ ನಮ್ಮಲ್ಲೇ ಉಂಟಾದ ಒಡಕಿನಿಂದ ನಮಗೆ ಸೋಲಾಗಿದೆ. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ. ನಮಗೆ ಸೈದ್ಧಾಂತಿಕವಾಗಿ, ರಾಜಕೀಯವಾಗಿ ಕಾಂಗ್ರೆಸ್ ಪ್ರಬಲ ಎದುರಾಳಿ ಹೊರತು, ಬೇರೆ ಯಾವುದೇ ಪಕ್ಷ ಅಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಅಲ್ಪ ಮತದಲ್ಲಿ ನಿಮ್ಮ ರಾಜಕೀಯ ಎದುರಾಳಿಯನ್ನು ಸೋಲಿಸಲು ಆಗಲಿಲ್ಲವೆಂಬ ಕೊರಗು ನಿಮಗಿದೆ. ಅದನ್ನು ನಾವು ನಿಮಗೆ ಈಗ ಈಡೇರಿಸಿ ಕೊಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮಾರ್ಮಿಕವಾಗಿ ಹೇಳಿದ್ದಾರೆ.
ಕಳೆದ ಎರಡು ಚುನಾವಣೆಯಲ್ಲಿ ನಮ್ಮ ಪಕ್ಷದ ಕೆಲವರು ನಮ್ಮ ಪಕ್ಷದ ಬೆನ್ನಿಗೆ ಚೂರಿ ಹಾಕಿರುವುದು ಸತ್ಯ. ಆದರೆ ಈ ಬಾರಿ ಆ ಮೀರಸಾಧಿಕ್ ಗಳ ಆಟ ನಡೆಯುವುದಿಲ್ಲ. ವರುಣ ಕ್ಷೇತ್ರದ ಜನ ಎಚ್ಚೆತ್ತುಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಟ್ಟ ಕ್ಷೇತ್ರದ ಜನರ ಬೆನ್ನಿಗೆ ಚೂರಿ ಹಾಕಿ, ಜನರನ್ನ ಗುಲಾಮರಂತೆ ಪರಿಗಣಿಸಿರುವವರಿಗೆ ಈ ಬಾರಿ ಖಂಡಿತ ಬುದ್ಧಿ ಕಲಿಸಿ ಮನೆಗೆ ಕಳಿಸುತ್ತಾರೆ. ಕ್ಷೇತ್ರದ ಜನ ಸಿದ್ದರಾಮಯ್ಯನವರನ್ನು ಬಾದಾಮಿಗೆ, ಚಾಮುಂಡೇಶ್ವರಿಗೆ ಹೋಗಿ ಎಂದು ಹೇಳಿರಲಿಲ್ಲ. ಕ್ಷೇತ್ರದ ಜನರನ್ನು ಮನ ಬಂದAತೆ ನಡೆಸಿಕೊಳ್ಳಲು ಹೊರಟಿರುವ ಸಿದ್ದರಾಮಯ್ಯನವರಿಗೆ, ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಚಾಮುಂಡೇಶ್ವರಿಯಲ್ಲಿ ಆದ ಗತಿ ವರುಣದಲ್ಲೂ ಆಗಲಿದೆ. ಸಿದ್ದರಾಮಯ್ಯನವರನ್ನು ಸೋಲಿಸಲು ನಮ್ಮ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಸಾಕು ಎಂದು ಗುಡುಗಿದ್ದಾರೆ.
ಏನೋ ಅಲ್ಲದ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲಿ ನಾಲ್ಕೈದು ಬಾರಿ ಗೆದ್ದು ರಾಜ್ಯ ನಾಯಕರಾಗಿ ಉಪಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು. ಅದಕ್ಕೆ ಕಾರಣ ಜೆಡಿಎಸ್ ಪಕ್ಷ. ಮುಖ್ಯಮಂತ್ರಿ ಕುರ್ಚಿ ಗಾಗಿ ಆ ಪಕ್ಷಕ್ಕೆ ದ್ರೋಹ ಮಾಡಿದರು. ಆದ್ದರಿಂದಲೇ ಮುಖ್ಯಮಂತ್ರಿ ಆಗಿ 5 ವರ್ಷ ಆಡಳಿತ ನೀಡಿ, ಸಿದ್ದರಾಮಯ್ಯ ಪ್ರಬಲರಾಗಿದ್ದರು. ಆದರೆ ಅವರನ್ನು ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ ಚಾಮುಂಡೇಶ್ವರಿ ಜನ ತಕ್ಕ ಪಾಠ ಕಲಿಸಿದರು. ಈ ಬಾರಿ ಕ್ಷೇತ್ರದ ಜನತೆ ಸಿದ್ದರಾಮಯ್ಯನವರ ಗರ್ವ ಭಂಗ ಮಾಡಿ ಮನೆಗೆ ಕಳಿಸುವುದು ಖಚಿತ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!