ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಅಮೆರಿಕ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿದ ಸಚಿವ ನಿರಾಣಿ ನೇತೃತ್ವದ ನಿಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಸಕ್ತ ವರ್ಷದ ನವೆಂಬರ್ 2,3 ಮತ್ತು 4 ರಂದು ನಡೆಯಲಿರುವ ರಾಜ್ಯದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ನೇತೃತ್ವದ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದೆ. ಈ ವೇಳೆ ವಿವಿಧ ಬಹುರಾಷ್ಟ್ರೀಯ ಸಂಸ್ಥೆಗಳ ಮಖ್ಯಸ್ಥರನ್ನು ಭೇಟಿಯಾಗಿ ನಿಯೋಗ ಚರ್ಚೆ ನಡೆಸಿದೆ.
ಸೋಮವಾರ ಫಾಲ್ಕಾನ್‌ಎಕ್ಸ್‌ ಸಹಯೋಗದಲ್ಲಿ ಭಾರತದ ಕಾನ್ಸುಲೇಟ್ ಜನರಲ್ – ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಜನರಲ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ನಿರಾಣಿ, ‘ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಅವಕಾಶ’ಗಳ ಕುರಿತಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಫಾಲ್ಕಾನ್‌ಎಕ್ಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇವಿ ರಮಣ ರೆಡ್ಡಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲರ್ ಜನರಲ್ ಡಾ. ಟಿವಿ ನಾಗೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು.
ಆ ಬಳಿಕ, ಬೇ ಏರಿಯಾದ ಮೇಡನ್ ಟೆಕ್ನಾಲಜಿ ಸೆಂಟರ್‌ನಲ್ಲಿ ಅಪ್ಲೈಡ್ ಮೆಟೀರಿಯಲ್ಸ್‌ನ ಸಿಟಿಒ ಮತ್ತು ಮಂಡಳಿ ಸದಸ್ಯ ಡಾ. ಓಂ ನಲಮಾಸು ಮತ್ತು ಸರ್ಕಾರಿ ವ್ಯವಹಾರಗಳ ನಿರ್ದೇಶಕ ಅಶ್ವಿನಿ ಅಗರ್ವಾಲ್ ಅವರು ಸಚಿವ ಡಾ. ಮುರುಗೇಶ ಆರ್ ನಿರಾಣಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
ಕರ್ನಾಟಕದಲ್ಲಿ 1500 ಕೋಟಿ ರೂ. ಮೊತ್ತದ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅಪ್ಲೈಡ್ ಮೆಟೀರಿಯಲ್ಸ್ ಇತ್ತೀಚೆಗೆ ಸಲ್ಲಿಸಿದ್ದ ಬಂಡವಾಳ ಹೂಡಿಕೆ ಪ್ರಸ್ತಾವನೆಯನ್ನು ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯು ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿತ್ತು.
ಆ ನಂತರ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗ್ಲೋಬಲ್ ಫೌಂಡ್ರೀಸ್ ಸಂಸ್ಥೆಯ ಪ್ರತಿನಿಧಿಗಳ ಜತೆಗೆ ಡಾ. ನಿರಾಣಿ ಅವರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉತ್ಪನ್ನ ನಿರ್ವಹಣೆಯ ಮುಖ್ಯಸ್ಥ ಎಡ್ ಕಾಸ್ಟ್, ಎಸ್‌ವಿಪಿ ಗುಣಮಟ್ಟ ವಿಭಾಗದ ಮೈಕ್ ಕ್ಯಾಡಿಗನ್, ವಿಪಿ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ವಿಭಾಗದ ರಾಜ್ ನಾಯರ್, ಉಪಾಧ್ಯಕ್ಷ ಜೆಸಿ ಚಡ್ಡಾ ಉಪಸ್ಥಿತರಿದ್ದರು.
2025ರ ವೇಳೆಗೆ ಅವರ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ವಿಸ್ತರಿಸುವ ಜತೆಗೆ ಉದ್ಯೋಗಿಗಳ ಸಂಖ್ಯೆಯನ್ನು 700 ರಿಂದ 1,200ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!