May 5, 2026
Tuesday, May 5, 2026
spot_img

ಕಳಂಕರಹಿತ ಪ್ರಧಾನಿ ಮೋದಿ ಆಡಳಿತಕ್ಕೆ ಒಲಿದ ಗೆಲುವು: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ, ಚಿತ್ರದುರ್ಗ

ಪಂಚರಾಜ್ಯಗಳಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳಂಕರಹಿತ ಪ್ರಧಾನಿ ಮೋದಿಯವರ ಆಡಳಿತದಿಂದ ಗೆಲುವು ಸಿಕ್ಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಜನರಿಂದ ಸಮಗ್ರತೆ ಉಳಿಸುವ ಕೆಲಸವಾಗಿದೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹೆಬ್ಬಾಗಿಲಾಗಿತ್ತು. ಬಂಗಾಳದಿಂದ ಪಾಕ್, ಬಾಂಗ್ಲಾದ ನುಸುಳುಕೋರರು ಬರುತ್ತಿದ್ದರು. ಬಿಜೆಪಿ ಪಕ್ಷದಿಂದ ತಡೆಗಟ್ಟುವ ಕೆಲಸ ಮಾಡಲಾಗುತ್ತದೆ. ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತ್ತು. ಮೋದಿ ನೇತೃತ್ವದ ಸರ್ಕಾರ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದ ಅವರು ಕರ್ನಾಟಕದಲ್ಲಿ ಎರಡು ಕಡೆಯಲಿ ನಡೆದ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತ್ತಿದ್ದಾರೆ . ಉಪಚುನಾವಣೆ ಫಲಿತಾಂಶವನ್ನು ನಾವು ಗೌರವಿಸುತ್ತೇವೆ ಎಂದರು.

ಶೃಂಗೇರಿ ಮರು ಮತ ಎಣಿಕೆ ವೇಳೆ ವೋಟ್ ಚೋರಿ ಎಂದು ಸಿಎಂ ಆರೋಪ ವಿಚಾರಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ್ದೇ ಆಡಳಿತ ಇದೆ. ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ ಆಗಿದೆ. ಅವರ ಮೇಲೆ ವಿಶ್ವಾಸವಿಲ್ಲ ಎಂದರೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ ಎಂದರ್ಥ. ಬ್ಯಾಲೆಟ್ ಬೇಕು.ಇವಿಎಂ ಬೇಡ ಎಂದು ಹೇಳುತ್ತಾರೆ. ೧೯೯೯ರಲ್ಲಿ ಬಾಗಲಕೋಟೆಯಲ್ಲಿ ನಾನು ಸೇರಿ ನಾಲ್ವರು ಗೆದ್ದಿದ್ದೆವು. ಬ್ಯಾಲೆಟ್ ಪೇಪರ್ ಬದಲಿಸಿ ನನ್ನ ಸೋಲಿಸಿದರು. ನನ್ನನ್ನು ೩೩೪ ಮತಗಳಿಂದ ಸೋಲಿಸಿದ್ದೇವೆಂದು ಘೋಷಿಸಿದರು ಎಂದರು.

ಬಾಗಲಕೋಟೆ, ಬಾದಾಮಿ, ಹುನಗುಂದದಲ್ಲೂ ಅದೇ ರೀತಿ ಸೋಲಿಸಿದರು. ಮರು ಮತ ಎಣಿಕೆಗೆ ಸಹ ಅವಕಾಶ ಕಲ್ಪಿಸಲಿಲ್ಲ. ಆಗ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ನವರು ಚೋರಿ ಮಾಡಲು ಬ್ಯಾಲೆಟ್ ಬೇಡುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !