September 8, 2026
Tuesday, September 8, 2026
spot_img

ಟೀಮ್ ಇಂಡಿಯಾಗೆ ‘ಡೂ ಆರ್ ಡೈ’ ಪಂದ್ಯ: ಆಸೀಸ್ ವಿರುದ್ಧ ಗೆದ್ದರೆ ಮಾತ್ರ ಸೆಮಿಫೈನಲ್ ಪಕ್ಕಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತ ತಲುಪಿದ್ದು, ಸೆಮಿಫೈನಲ್ ರೇಸ್ ರೋಮಾಂಚಕ ಘಟ್ಟಕ್ಕೆ ತಲುಪಿದೆ. ಈಗಾಗಲೇ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿವೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಿದ್ದು, ಉಳಿದ ಒಂದು ಸ್ಥಾನಕ್ಕಾಗಿ ಭಾರತ ಹಾಗೂ ಸೌತ್ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಭಾರತಕ್ಕೆ ಆಸ್ಟ್ರೇಲಿಯಾ ಸವಾಲು

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಬೇಕಾದರೆ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಡ್ಡಾಯವಾಗಿ ಗೆಲ್ಲಬೇಕಿದೆ. ಭಾರತ ಗೆಲುವು ಸಾಧಿಸಿದರೆ ನೇರವಾಗಿ 8 ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಇದೇ ವೇಳೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಬಾಂಗ್ಲಾದೇಶದ ವಿರುದ್ಧ ಸೋತರೆ, ಭಾರತದ ಸೆಮಿಫೈನಲ್ ಪ್ರವೇಶ ಅಧಿಕೃತವಾಗಲಿದೆ.

ನೆಟ್ ರನ್ ರೇಟ್ ಆಟ

ಒಂದು ವೇಳೆ ಭಾರತ ಮತ್ತು ಸೌತ್ ಆಫ್ರಿಕಾ ಎರಡೂ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಜಯಗಳಿಸಿದರೆ, ಆಸ್ಟ್ರೇಲಿಯಾ ಸೇರಿದಂತೆ ಮೂರೂ ತಂಡಗಳು ತಲಾ 8 ಅಂಕಗಳನ್ನು ಹೊಂದಲಿವೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ನೆಟ್ ರನ್ ರೇಟ್ (NRR) ಹೊಂದಿರುವ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಪ್ರಸ್ತುತ ರನ್ ರೇಟ್: ಸದ್ಯ ಭಾರತ ತಂಡವು ಅತ್ಯುತ್ತಮ ನೆಟ್ ರನ್ ರೇಟ್ (+2.268) ಹೊಂದಿದ್ದು, ಇದು ಸೌತ್ ಆಫ್ರಿಕಾ (+0.734) ತಂಡಕ್ಕಿಂತ ಸಾಕಷ್ಟು ಉತ್ತಮವಾಗಿದೆ. ಹೀಗಾಗಿ ಆಸೀಸ್ ವಿರುದ್ಧ ಜಯಭೇರಿ ಬಾರಿಸಿದರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !