September 2, 2026
Wednesday, September 2, 2026
spot_img

ಕಿಚ್ಚನ ಬರ್ತ್‌ಡೇ ದಿನವೇ ಡಬಲ್ ಧಮಾಕ: ‘ದೇವರಾಯ’ ಟೈಟಲ್ ಪ್ರೋಮೋಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ, ಕನ್ನಡಿಗರ ಪ್ರೀತಿಯ ಕಿಚ್ಚ ಸುದೀಪ್ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ತಮ್ಮ ಅಭಿಮಾನಿಗಳಿಗೆ ಸುದೀಪ್ ಕಡೆಯಿಂದ ಒಂದು ಗ್ರಾಂಡ್ ಗಿಫ್ಟ್ ಸಿಕ್ಕಿದೆ. ಸುದೀಪ್ ತಮ್ಮ ಮುಂದಿನ ಬಿಗ್ ಬಜೆಟ್ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದು, ಚಿತ್ರಕ್ಕೆ ‘ದೇವರಾಯ’ ಎಂದು ಹೆಸರಿಡಲಾಗಿದೆ. ‘

‘ಒಂದು ಇತಿಹಾಸ ಸೃಷ್ಟಿಸಿದ ಸಾಮ್ರಾಜ್ಯ, ಒಂದು ಯುಗವನ್ನೇ ಆಳಿದ ರಾಜ, ಕಾಲವನ್ನೂ ಮೀರಿ ನಿಲ್ಲುವ ಒಬ್ಬ ಲೆಜೆಂಡ್’ ಎಂದು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಪ್ಷನ್ ಕೊಟ್ಟು ಪೋಸ್ಟರ್ ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಬೆಂಕಿ ಎಬ್ಬಿಸಿದೆ.

ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾಂವಿ ಪಿಕ್ಚರ್ ಸ್ಟುಡಿಯೋ ಬ್ಯಾನರ್‌ನಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರೋಮೋದಲ್ಲಿ ಬರೋ ಗೌರ ಹರಿ ಕೆ ಅವರ ಹಿನ್ನೆಲೆ ಸಂಗೀತವಂತೂ ರೋಮಾಂಚನ ಉಂಟುಮಾಡುವಂತಿದೆ. ಚಿತ್ರದ ಕಥೆ ಬಗ್ಗೆ ನಿರ್ಮಾಪಕರು ಜಾಸ್ತಿ ಬಿಟ್ಟುಕೊಟ್ಟಿಲ್ಲವಾದರೂ, ರಾಜಮನೆತನ, ಅಧಿಕಾರ ಮತ್ತು ಸಾಮ್ರಾಜ್ಯದ ಸುತ್ತಲೂ ಕಥೆ ಸಾಗಲಿದೆ ಎಂಬ ಸುಳಿವು ಸಿಕ್ಕಿದೆ.

ವಿಜಯನಗರ ಸಾಮ್ರಾಜ್ಯವನ್ನು 1509ರಿಂದ 1529ರವರೆಗೆ ಆಳಿದ ತುಳುವ ವಂಶದ ಶ್ರೇಷ್ಠ ದೊರೆ ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಿಚ್ಚ ಮಿಂಚಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದ್ದು, ಸಿನಿಮಾ 2027ರ ಡಿಸೆಂಬರ್‌ನಲ್ಲಿ ಬೆಳ್ಳಿಪರದೆಯ ಮೇಲೆ ಬರಲಿದೆ.

ಇತ್ತೀಚೆಗಷ್ಟೇ ‘ಮಾರ್ಕ್’ ಸಿನಿಮಾದ ಸಕ್ಸಸ್ ಹಾಗೂ ‘ಕೆಡಿ’ ಸಿನಿಮಾದ ಗೆಸ್ಟ್ ಅಪಿಯರೆನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಸುದೀಪ್, ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳೊಂದಿಗೆ ಬ್ಯುಸಿಯಾಗಿದ್ದಾರೆ. ಅವರ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಪೋಸ್ಟರ್ ಕೂಡ ಇಂದು ರಿಲೀಸ್ ಆಗಿ ಧೂಳೆಬ್ಬಿಸಿದೆ. ಸೆಪ್ಟೆಂಬರ್ 6ರಿಂದ ಶುರುವಾಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 13’ ನಿರೂಪಣೆಗೂ ಕಿಚ್ಚ ರೆಡಿಯಾಗಿದ್ದಾರೆ. ಒಟ್ಟಿನಲ್ಲಿ 53ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ರಿವೀಲ್ ಆಗಿರುವ ಈ ‘ದೇವರಾಯ’ ಅವತಾರ ಸುದೀಪ್ ಕೆರಿಯರ್‌ನಲ್ಲೇ ಒಂದು ಹೊಸ ಮೈಲಿಗಲ್ಲಾಗುವುದರಲ್ಲಿ ಅನುಮಾನವಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !