ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದು, ಅನೇಕ ವರ್ಷಗಳಿಂದ ಮೂಲ ಸೌಕರ್ಯದಿಂದ ಹಿಂದೆ ಬಿದಿದ್ದ ಹಳ್ಳಿಗಳು ಕೂಡ ಇಂದು ಉನ್ನತೀಕರಣದತ್ತ ಸಾಗುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ ಕಾಣದೆ ಕತ್ತಲಲ್ಲೇ ಇದ್ದ ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದರ ಜನರು ಇದೀಗ ಬೆಳಕನ್ನು ಕಂಡಿದ್ದು.
ಹೌದು, ಅನಂತ್‌ನಾಗ್ ಜಿಲ್ಲೆಯ ದೂರು ಹೆಸರಿನ ಬ್ಲಾಕ್‌ನಲ್ಲಿರುವ ತೆಥಾನ್ ಗ್ರಾಮ 75 ವರ್ಷಗಳಿಂದ ವಿದ್ಯುತ್ ಸಂಪರ್ಕವನ್ನೇ ಕಂಡಿರಲಿಲ್ಲ. ಇದೀಗ ಈ ಗ್ರಾಮಕ್ಕೆ ಪ್ರಧಾನ ಮಂತ್ರಿ ಅವರ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಹಳ್ಳಿಯಲ್ಲಿ, 60 ಮನೆಗಳಿದ್ದು, 200 ಜನರಿದ್ದಾರೆ. ಒಟ್ಟು 95 ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ಸಂಪರ್ಕ ನೀಡಲಾಗಿದೆ.
ಇದೀಗ ಕೊನೆಗೂ ಊರಿನಲ್ಲಿ ಬೆಳಕು ಕಂಡು ಗ್ರಾಮವೇ ಸಂತಸದಲ್ಲಿ ಮೈ ಮರೆತಿದೆ.
ಗ್ರಾಮಸ್ಥರಾದ ಜಫರ್ ಖಾನ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ‘ನನಗೀಗ 60 ವರ್ಷ. ಇದೇ ಮೊದಲನೇ ಬಾರಿಗೆ ನಾನು ವಿದ್ಯುತ್ ಬೆಳಕು ನೋಡುತ್ತಿದ್ದೇನೆ. ಇದನ್ನು ಸಾಧ್ಯ ಮಾಡಿಕೊಟ್ಟ ಅಧಿಕಾರಿಗೆ ಹಾಗೂ ವಿದ್ಯುತ್ ಇಲಾಖೆಗೆ ನನ್ನ ಧನ್ಯವಾದಗಳು. ನನ್ನ ಹಿಂದಿನ ತಲೆಮಾರಿನವರಿಗೆ ಈ ಸುಂದರ ದೃಶ್ಯಗಳನ್ನು ನೋಡುವ ಅದೃಷ್ಟವಿರಲಿಲ್ಲ. ನಾವು ನಿಜಕ್ಕೂ ಅದೃಷ್ಟವಂತರು’ ಎಂದು ಹೇಳಿದ್ದಾರೆ.