ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೈಲಿನಲ್ಲಿ ಸೀಟಿನ ವಿಚಾರಕ್ಕೆ ಉಂಟಾದ ಜಗಳದಿಂದ ರೈಲು ನಿಲ್ದಾಣದಲ್ಲಿ 16 ವರ್ಷದ ಹುಡುಗನೊಬ್ಬ, ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮುಂಬೈ ನ ಸೆಂಟ್ರಲ್ ರೈಲ್ವೇಯ ಘಾಟ್‌ಕೋಪರ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹಾಗೂ ಆತನ ಹಿರಿಯ ಸಹೋದರನನ್ನು ಕುರ್ಲಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತಪಟ್ಟ ಅಂಕುಶ್ ಭಗವಾನ್ ಭಾಲೇರಾವ್ ನವೆಂಬರ್ 14 ರಂದು ಟಿಟ್ವಾಲಾದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂಕುಶ್ ಮತ್ತು ಅಪ್ರಾಪ್ತನ ನಡುವೆ ಸೀಟಿನ ವಿಷಯದಲ್ಲಿ ತೀವ್ರ ವಾಗ್ವಾದ ನಡೆದಿದೆ.
ಈ ಸಂದರ್ಭದಲ್ಲಿ ಅಂಕುಶ್ ಆರೋಪಿಯ ಕಪಾಳಕ್ಕೆ ಹೊಡೆದಿದ್ದಾರೆ. ಮಾರನೇ ದಿನ ಅಂಕುಶ್ ಅದೇ ರೈಲಿನಲ್ಲಿ ಘಾಟ್ ಕೋಪರ್ ನಿಲ್ದಾಣ ತಲುಪಿದ್ದು, ಪ್ಲಾಟ್ ಫಾರಂ ನಂ 4ರಲ್ಲಿ ನಡೆದು ಹೋಗುತ್ತಿದ್ದಾಗ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರನ್ನು ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಅಪ್ರಾಪ್ತನನ್ನು ಬಂಧಿಸಿದ್ದಾರೆ ಮತ್ತು ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದ ಆತನ ಸಹೋದರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮನೆಯ ಛಾವಣಿಯ ಮೇಲೆ ಚಾಕುವನ್ನು ಬಚ್ಚಿಟ್ಟು, ತನ್ನ ಗುರುತು ಸಿಗದಂತೆ ಮಾಡಲು ತನ್ನ ತಲೆಗೂದಲನ್ನು ಕತ್ತರಿಸಿದ್ದನ್ನು ಬಾಯ್ಬಿಟ್ಟಿದ್ದಾನೆ. ಹದಿಹರೆಯದ ಆರೋಪಿಯನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.