ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ನಾಯಕರು ಮಾಡಿದ ಆರೋಪಗಳ ವಿರುದ್ಧ ಬಿಜೆಪಿ ನಾಯಕ ವಿನೋದ್ ತಾವ್ಡೆ ಸಿಡಿದೆದ್ದಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸುಪ್ರಿಯಾ ಶ್ರೀನತ್ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ಮತದಾರರಿಗೆ ಲಂಚ ನೀಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದಕ್ಕಾಗಿ ಬಿಜೆಪಿ ನಾಯಕ ನೋಟಿಸ್ ಕಳುಹಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯ ಮುನ್ನಾದಿನದಂದು ಬಹುಜನ ವಿಕಾಸ್ ಅಘಾಡಿ (ಬಿವಿಎ) ಶಾಸಕ ಕ್ಷಿತಿಜ್ ಠಾಕೂರ್ ಅವರು ಮತದಾರರನ್ನು ಓಲೈಸುವ ಯತ್ನದಲ್ಲಿ ತಾವ್ಡೆ ಅವರು ನಗದು ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಮತಕ್ಕಾಗಿ ಹಣದ ಮಳೆ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿತು.
ಇದಾದ ಬಳಿಕ ವಿನೋದ್ ತಾವ್ಡೆ ಅವರು ಮತದಾರರಿಗೆ ಹಂಚುತ್ತಿದ್ದ 5 ಕೋಟಿ ರೂಪಾಯಿಗಳೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಖರ್ಗೆ, ಗಾಂಧಿ ಮತ್ತು ಶ್ರೀನತ್ ಆರೋಪಿಸಿದ್ದರು. ಆದರೆ ತಾವ್ಡೆ ಹಾಗೂ ಬಿಜೆಪಿ ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿತ್ತು.
ಕಾಂಗ್ರೆಸ್ನವರು ನನ್ನ ಮತ್ತು ನನ್ನ ಪಕ್ಷದ ಮಾನಹಾನಿ ಮಾಡಲು ಬಯಸಿದ್ದರು. ನಾನು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ, ಎಂದಿಗೂ ನಾನು ಆ ರೀತಿ ಮಾಡಿಲ್ಲ. ಕಾಂಗ್ರೆಸ್ ನಾಯಕರು ನನ್ನನ್ನು, ಪಕ್ಷವನ್ನು ಮತ್ತು ನನ್ನ ನಾಯಕರನ್ನು ದೂಷಿಸಲು ಬಯಸಿದ್ದರು ಆದ್ದರಿಂದ ಅವರು ಉದ್ದೇಶಪೂರ್ವಕವಾಗಿ ಮಾಧ್ಯಮಗಳು ಮತ್ತು ಜನರಿಗೆ ಈ ಸುಳ್ಳುಗಳನ್ನು ಹೇಳಿದ್ದಾರೆ. ಆದ್ದರಿಂದ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಅಥವಾ ಕ್ರಮವನ್ನು ಎದುರಿಸಬೇಕು ಎಂದು ನಾನು ಅವರಿಗೆ ನ್ಯಾಯಾಲಯ ನೋಟಿಸ್ ನೀಡಿದ್ದೇನೆ ಎಂದು ತಾವ್ಡೆ ತಿಳಿಸಿದ್ದಾರೆ.
ಪಕ್ಷದ ಭವಿಷ್ಯವನ್ನು ಹಾಳು ಮಾಡುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಹಣ ಹಂಚಿಕೆಯ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಾವ್ಡೆ ತಮ್ಮ ನೋಟಿಸ್‌ನಲ್ಲಿ ಆರೋಪಿಸಿದರುನೀವು ಮಾಡಿರುವ ಸಂಪೂರ್ಣ ಆರೋಪವು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿದೆ ಎಂದು ನೋಟಿಸ್ ನಲ್ಲಿದೆ.
24 ಗಂಟೆಗಳ ಒಳಗೆ ರಾಹುಲ್ ಗಾಂಧಿ, ಖರ್ಗೆ ಮತ್ತು ಶ್ರೀನತ್ ಬೇಷರತ್ ಕ್ಷಮೆಯಾಚಿಸಬೇಕೆಂದು ತಾವ್ಡೆ ಒತ್ತಾಯಿಸಿದರು. ಕ್ಷಮೆ ಕೇಳಲು ವಿಫಲವಾದರೆ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದ್ದಾರೆ.