-ಸಂದೇಶ ಆರ್ ಅಹಂಕಾರಿ
ಒಂದೆಡೆ ತೀವ್ರ ಬಡತನ ಇನ್ನೊಂದೆಡೆ ಚಿತ್ರಕಲೆ ಕಡೆಗಿನ ತುಡಿತದಿಂದ ಇಲ್ಲಿನ ಕಲಾವಿದನೊಬ್ಬ ಕಡು ಬಡತನದಲ್ಲಿಯೇ ತೆರೆಮರೆಯಲ್ಲಿ ಕಲಾ ತಪಸ್ಸನ್ನು ನಡೆಸುತ್ತಿದ್ದು, ಇದೀಗ ಪೋಷಕರಿಗಾಗಿ, ಸೂಕ್ತ ವೇದಿಕೆಗಾಗಿ ತಡಕಾಡುತ್ತಿದ್ದಾನೆ.
ಬಾಲ್ಯದಲ್ಲಿನ ಆಸಕ್ತಿಯಿಂದ ಕಲಾವಿದನಾಗಿ ರೂಪಗೊಂಡು, ಕೊನೆಗೆ 5 ವರ್ಷದ ಬಿ.ವಿ.ಎ. ಚಿತ್ರಕಲಾ ಪದವಿ ಪಡೆದುಕೊಂಡಿದ್ದಾನೆ. ಮೂಲತಃ ಸುರಪುರ ತಾಲೂಕಿನ ಮುಲ್ಲಾಬಿ ಗ್ರಾಮದ ಕಲಾವಿದ ಸಿದ್ದನಗೌಡ ಗಬಸಾವಳಗಿ ಇದೀಗ ಉದ್ಯೋಗ ಅರಸಿ ಅಲ್ಲಲ್ಲಿ ಕಲಾವಿದರಿಗೆ ಸಿಗುವ ಚಿಕ್ಕ-ಪುಟ್ಟ ಕೆಲಸ ಕಾರ್ಯಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಬಡತನದ ಬೇಗೆಯಲ್ಲಿದ್ದಾರೆ.
ಚಿತ್ರ ಕಲಾವಿದ ಸಿದ್ದನಗೌಡ ಎಸ್ ಗಬಸಾವಳಗಿ ಅವರ ಕಲಾಕೃತಿಗಳಲ್ಲಿ ಚಲನಶೀಲತೆ ಇದೆ. ಅವುಗಳಲ್ಲಿ ಒಂದು ಬಗೆಯ ಚುಂಬಕ ಸೆಳೆತವಿದೆ. ಕಲಾಕೃತಿ ನೋಡಿದ ಎಂತಹವರೂ ವಾವ್.. ಎಂದು ಉದ್ಗರಿಸದೇ ಇರಲಾರರು ಎಂದು ಸ್ಥಳೀಯರು ಅವರ ಕಲೆಗೆ ಪ್ರಶಂಸಿದ್ದಾರೆ. ಇಂಥಃ ಕಲಾವಿದರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿ ಎಂಬುದೇ ಆಶಯ.