ಜಾಯಿಕಾಯಿ ಮಿಶ್ರ ಬೆಳೆಯನ್ನಾಗಿ ಬೆಳೆದು ಯಶಸ್ವಿ…

-ಮಂಜುನಾಥ ಗಣೇಶ ಹೆಗಡೆ

ಉಪನ್ಯಾಸಕ ವೃತ್ತಿಯ ಜೊತೆ ಕೃಷಿಯಲ್ಲಿ ಆಸಕ್ತಿ. ಮಿಶ್ರ ಬೆಳೆ ಕೃಷಿಯನ್ನು ನೆಚ್ಚಿಕೊಂಡು ತಮ್ಮದೆ ಕಲ್ಪನೆಯಲ್ಲಿ ಕುಮಟಾ ತಾಲೂಕಿನ ಕುಡವಳ್ಳಿ ಗ್ರಾಮದ ಕೃಷಿಕ ಸುಬ್ರಹ್ಮಣ್ಯ ಭಟ್ಟ ತಮ್ಮ ಅಡಿಕೆ ತೋಟದ ಮಧ್ಯೆ ಜಾಯಿಕಾಯಿಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಯಶಸ್ವಿಯಾಗಿದ್ದಾರೆ.

ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಕೃಷಿಕ ಸುಬ್ರಹ್ಮಣ್ಯ ಭಟ್ಟ, ಜಾಯಿಕಾಯಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಅತ್ಯಂತ ಬೇಡಿಕೆಯುಳ್ಳ ಸಾಂಬಾರ ಪದಾರ್ಥವಾಗಿರುವ ಜಾಯಿಕಾಯಿ ಮತ್ತು ಜಾಪತ್ರೆ 2 ವಿಶಿಷ್ಟ ಮಸಾಲೆ ಪದಾರ್ಥ ಒದಗಿಸುತ್ತದೆ. ಅಲ್ಲದೇ ಜಾಯಿಕಾಯಿ ಮತ್ತು ಜಾಪತ್ರೆಯಿಂದ ಎಣ್ಣೆ ಮತ್ತು ಸುಹಾಸನೆ ಭರಿತ ತೈಲ ಉತ್ಪಾದಿಸಲಾಗುತ್ತದೆ. ಇವುಗಳನ್ನು ಸಾಬೂನು, ಶಾಂಪೂ, ಸೌಂದರ್ಯ ವರ್ಧಕ, ಸುಗಂಧ ದ್ರವ್ಯ ಹಾಗೂ ಜೌಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕುಮಟಾ ತೋಟಗಾರಿಕಾ ಇಲಾಖೆಯಿಂದ 2012-13 ನೇಯ ಇಸವಿಯಲ್ಲಿ ಅಡಿಕೆ ತೋಟದಲ್ಲಿ ಜಾಯಿಕಾಯಿಯನ್ನು ಮಿಶ್ರಬೆಳೆಯನ್ನಾಗಿ ಬೆಳೆಯಲು ವಿಶ್ವಶ್ರೀ ಮತ್ತು ಕೇರಳಶ್ರೀ ತಳಿಯನ್ನು ಸಹಾಯಧನದಲ್ಲಿ ವಿತರಿಸಿದ್ದರು. ಇದನ್ನು ಅರ್ಧ ಎಕರೆಯಲ್ಲಿ ಬೆಳೆಯಲಾಗಿದ್ದು, ಇನ್ನೂ ಅರ್ಧ ಎಕರೆಯಲ್ಲಿ ಕುಮಟಾ ತಾಲೂಕಿನ ಸುತ್ತಮುತ್ತಲಿನ ಸ್ಥಳೀಯ ತಳಿಗಳನ್ನು ನಾಟಿ ಮಾಡಿದ್ದೇನೆ. ಒಂದೇ ಮರದಿಂದ 2 ಮಸಾಲೆ ಪದಾರ್ಥಗಳು ದೊರೆಯುವುದರಿಂದ ಈ ಬೆಳೆ ಲಾಭದಾಯಕ. ಗಿಡ ನಾಟಿ ಮಾಡಿದ 6 ರಿಂದ 8 ವರ್ಷಗಳಲ್ಲಿ ಫಸಲು ಬರಲು ಪ್ರಾರಂಭಿಸುತ್ತದೆ. ಜೂನ್‌ನಿಂದ ಆಗಷ್ಟ್ ತಿಂಗಳ ಅವಧಿ ಮುಖ್ಯ ಕೊಯ್ಲಿನ ಸಮಯವಾಗಿರುತ್ತದೆ. ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ ಆಯ್ಕೆ ಉತ್ತಮ ಮತ್ತು ಲಾಭದಾಯಕ ಎನ್ನುತ್ತಾರೆ ಸುಬ್ರಹ್ಮಣ್ಯ ಭಟ್ಟ.

ದರದಲ್ಲಿ ಏರಿಳಿತ ಸಾಮಾನ್ಯ. ಈ ವರ್ಷ 50 ಕೆ.ಜಿಗಿಂತ ಅಧಿಕ ಪ್ರಮಾಣದಲ್ಲಿ ಜಾಯಿಕಾಯಿ ಮತ್ತು 8 ಕೆ.ಜಿ.ಯಷ್ಟು ಜಾಪತ್ರೆಯನ್ನು ಬೆಳೆದಿರುವೆ. ಪ್ರತಿ ಕೆ.ಜಿ. ಜಾಯಿಕಾಯಿಗೆ 200 ರಿಂದ 250 ರೂ. ಮತ್ತು ಜಾಪತ್ರೆಗೆ 1000 ದಿಂದ 1250 ವರೆಗೆ ದರವಿದೆ. ಮಳೆಗಾಲದಲ್ಲಿ ರೈತರಿಗೆ ಆದಾಯ ನೀಡುವ ಬೆಳೆ ಅಡಿಕೆ ಮತ್ತು ತೆಂಗು ಪ್ರಮುಖ ಬೆಳೆಯಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಜಾಯಿಕಾಯಿ ಮುಖ್ಯ ಉಪ ಬೆಳೆಯಾಗಿ ಮಾಡಿಕೊಳ್ಳಲು ಬಹಳ ಅವಕಾಶವಿದೆ. ಮಳೆಗಾಲದಲ್ಲಿ ರೈತರಿಗೆ ಆದಾಯ ನೀಡುವ ಬೆಳೆಯಾಗಿದ್ದು, ಗುಣಮಟ್ಟದಲ್ಲಿ ಸಂಸ್ಕರಣೆಗೆ ಆದ್ಯತೆ ನೀಡಬೇಕು ಎಂದು ಸುಬ್ರಮಣ್ಯ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!