ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಹೆಚ್ಚಿನ ಪಕ್ಷ ಬಟ್ಟೆ ಅಂಗಡಿಗಳೇ ಇವೆ, ಈ ಬಟ್ಟೆ ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಏಳೆಂಟು ಬಟ್ಟೆ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿವೆ. ಒಳಗಿದ್ದ ವಸ್ತುಗಳು ಆಹುತಿಯಾಗಿವೆ. ಬಸವೇಶ್ವರ ದೇವಸ್ಥಾನದ ಹಿಂಭಾಗದ ಬಟ್ಟೆ ಮಾರುಕಟ್ಟೆಯ ಅಂಗಡಿಗಳಿಗೆ ಬೆಂಕಿ ಹೊತ್ತುಕೊಂಡಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಆದರೆ ಇಡೀ ಆವರಣದಲ್ಲಿ ದಟ್ಟ ಹೊಗೆ ಆವರಿಸಿದೆ. ಇದರಿಂದಾಗಿ ಬೆಂಕಿ ಎಲ್ಲಿದೆ ಎನ್ನುವುದೇ ತಿಳಿದುಬಂದಿಲ್ಲ.
ಬಟ್ಟೆ ಮಾರುಕಟ್ಟೆ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿದು ದೊಡ್ಡ ಸಂಖ್ಯೆಯಲ್ಲಿ ಜನರು ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆ ಬಳಿ ಸೇರಿದ್ದಾರೆ. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.