ಸ್ವತಂತ್ರ ದೇಶವೆಂದರೆ ಇದು: ಭಾರತ, ಸಚಿವ ಜೈಶಂಕರ್ ಅನ್ನು ಕೊಂಡಾಡಿದ ಇಮ್ರಾನ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಶ್ಲಾಘಿಸಿದ್ದು, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.

ಲಾಹೋರ್‌ನಲ್ಲಿ ಸೇರಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕಿಡಿಕಾರಿದರು. ಈ ಸಂಬಂಧ ಸ್ಲೋವಾಕಿಯಾದಲ್ಲಿ ನಡೆದ ಬ್ರಟಿಸ್ಲಾವಾ ವೇದಿಕೆಯ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮಾತುಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ವಿರುದ್ಧ ಅಮೆರಿಕದ ಒತ್ತಡವನ್ನು ಲೆಕ್ಕಿಸದೆ ದೃಢವಾಗಿ ನಿಂತಿದ್ದಕ್ಕೆ ಜೈಶಂಕರ್ ಅವರನ್ನು ಹಾಡಿ ಹೊಗಳಿದ್ದಾರೆ.

ಪಾಕಿಸ್ತಾನದ ಸಂದರ್ಭದಲ್ಲಿಯೇ ಭಾರತ ಸ್ವಾತಂತ್ರ್ಯ ಪಡೆದಿದ್ದಾಗ, ಹೊಸದಿಲ್ಲಿಯು ದೃಢವಾಗಿ ನಿಂತು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯವಾಗುವುದಾದರೆ, ದಾರಿ ತಪ್ಪುತ್ತಿರುವ ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾರು?. ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಆದೇಶ ನೀಡಿತ್ತು. ಭಾರತವು ಅಮೆರಿಕ ಕಾರ್ಯತಂತ್ರ ಮಿತ್ರ ದೇಶ. ಪಾಕಿಸ್ತಾನ ಅಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಸೂಚಿಸಿದಾಗ ಭಾರತದ ವಿದೇಶಾಂಗ ಸಚಿವರು ಹೇಳಿದ್ದೇನು ನೋಡಿ ಎಂದು ಎಸ್ ಜೈಶಂಕರ್ ಅವರ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ನೀವು ಯಾರು ಎಂದು ಜೈಶಂಕರ್ ಪ್ರಶ್ನಿಸುತ್ತಾರೆ. ರಷ್ಯಾದಿಂದ ಯುರೋಪ್ ಅನಿಲ ಖರೀದಿ ಮಾಡುತ್ತಿದೆ. ನಮ್ಮ ಜನರಿಗೆ ಅಗತ್ಯ ಇರುವುದರಿಂದ ನಾವೂ ಖರೀದಿ ಮಾಡುತ್ತೇವೆ ಎಂದು ಜೈಶಂಕರ್ ಹೇಳುತ್ತಾರೆ. ಇದೇ ವಿಡಿಯೋ ತೋರಿಸಿ ಇಮ್ರಾನ್ ಖಾನ್, ಸ್ವತಂತ್ರ ದೇಶವೆಂದರೆ ಇದು ಎಂದು ಭಾರತವನ್ನು ಕೊಂಡಾಡಿದ್ದಾರೆ.

ಇದೇ ವೇಳೆ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಟೀಕಿಸಿದ್ದಾರೆ. ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ನಾವು ರಷ್ಯಾ ಜತೆ ಮಾತುಕತೆ ನಡೆಸಿದ್ದೆವು. ಆದರೆ ಅಮೆರಿಕದ ಒತ್ತಡಕ್ಕೆ ಇಲ್ಲ ಎನ್ನುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಇಂಧನ ದರಗಳು ಗಗನಕ್ಕೆ ಏರುತ್ತಿವೆ. ಜನರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ನಾನು ಗುಲಾಮಗಿರಿಯ ವಿರುದ್ಧವಿದ್ದೇನೆ ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರು ಭಾರತವನ್ನು ಹೊಗಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ತಾವು ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾದ ಸಂದರ್ಭದಿಂದಲೂ ಅವರು ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!