October 8, 2026
Thursday, October 8, 2026
spot_img

ಜಿಂಕೆ ಮಾಂಸ ಮಾರಾಟದ ಅಡ್ಡೆ ಮೇಲೆ ದಾಳಿ: 34.9 ಕೆಜಿ ಮಾಂಸ ಜಪ್ತಿ, ಇಬ್ಬರು ಅರೆಸ್ಟ್

ಹೊಸದಿಗಂತ ವರದಿ ಶಿವಮೊಗ್ಗ:

ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆವಟೂರು ಆನೆಕೆರೆ ಬಳಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸ್ ಅರಣ್ಯ ಸಂಚಾರಿ ದಳ ಭೇದಿಸಿದೆ.

ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 39.45 ಕೆ.ಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ನೆವಟೂರು ಆನೆಕೆರೆ ನಿವಾಸಿಗಳಾದ ನಿಂಗಪ್ಪ ಹಾಗೂ ರಾಮಪ್ಪ ಬಂಧಿತ ಆರೋಪಿಗಳು.

ಇದನ್ನೂ ಓದಿ:

ನೆವಟೂರು ಆನೆಕೆರೆ ಪರಿಸರದಲ್ಲಿ ವನ್ಯಜೀವಿಯ ಮಾಂಸ ಮಾರಾಟ ನಡೆಯುತ್ತಿರುವ ಕುರಿತು ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ವಿನಾಯಕ ಕೆ. ಅವರ ನೇತೃತ್ವದ ಪೊಲೀಸ್ ತಂಡವು ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿತು. ದಾಳಿಯ ವೇಳೆ ಸ್ಥಳದಲ್ಲಿದ್ದ 34.945 ಕೆ.ಜಿ ತೂಕದ ಜಿಂಕೆಯ ದೇಹ ಹಾಗೂ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ವಿನಾಯಕ ಕೆ. ಅವರೊಂದಿಗೆ ಸಿಬ್ಬಂದಿಗಳಾದ ಆಂಜನೇಯ ಪಾಟೀಲ್, ಬಿ.ಸಿ. ಗಣೇಶ, ಚಂದ್ರಕಾಂತ, ಮಹೇಶ, ಹೆಚ್.ಬಿ. ದೊಡ್ಡಮನಿ ಮತ್ತು ಪ್ರಮೋದಿನಿ ಪಾಲ್ಗೊಂಡಿದ್ದರು. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Must Read