Thursday, March 23, 2023

Latest Posts

ಗುಣಮಟ್ಟದ ಚಿಕಿತ್ಸೆಯೊಂದಿಗೆ ಆಸ್ಪತ್ರೆಗಳೂ ಜೀವಂತವಾಗಿರುವಂತೆ ನೋಡಿಕೊಳ್ಳಿ: ಶಾಸಕ ಬೋಪಯ್ಯ

ಹೊಸ ದಿಗಂತ ವರದಿ , ಮಡಿಕೇರಿ:

ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರೊಂದಿಗೆ ಕೇವಲ ರೋಗಿಗಳನ್ನಷ್ಟೇ ಅಲ್ಲದೆ ಚಿಕಿತ್ಸಾಲಯಗಳು  ಜೀವಂತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಸಲಹೆ ಮಾಡಿದರು.
ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕರು ಬಡ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಅಂತಹವರಿಗೆ ಸೂಕ್ತ ಚಿಕಿತ್ಸೆ ನೀಡುವ ವಿಷಯದಲ್ಲಿ ಧನಾತ್ಮಕ ಚಿಂತನೆಗಳು ವೈದ್ಯರಿಂದಾಗಬೇಕಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯಕ್ಕೆ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಶುಚಿತ್ವ ಕಾಪಾಡಿಕೊಳ್ಳಲಾಗಿದೆ ಎಂದರು.

ಮುಖ್ಯ ಆಡಳಿತ ವೈದ್ಯಾಧಿಕಾರಿ ಜೆ.ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯ ಅಬಿವೃದ್ಧಿ ಬಗ್ಗೆ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಅವರು, ಹೊರ ರೋಗಿಗಳಿಗೆ ಸಂದರ್ಶನ ಶುಲ್ಕ ಹತ್ತು ರೂಪಾಯಿ ಏರಿಕೆ ಮಾಡುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಶಾಸಕ ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸಮ್ಮತಿ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕೆಲವರು ದರ್ಪದಿಂದ ಮತ್ತು ವೈದ್ಯರನ್ನು ಅವಹೇಳನ ಮಾಡುವುದು, ಹೆದರಿಸುವುದು, ಆಸ್ಪತ್ರೆ ಒಳಗೆ ನುಗ್ಗಿ ದಾಂಧಲೆ ನಡೆಸುವುದು, ಗಲಾಟೆ ಮಾಡುವುದು, ಆಸ್ಪತ್ರೆಯ ಉಪಕರಣಗಳಿಗೆ ಹಾನಿ ಮಾಡುವುದು ಜಾಸ್ತಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.

ಸಭೆಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಅಧಿಕಾರಿಗಳು ಸಭೆಗೆ ಆಗಮಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಬೋಪಯ್ಯ, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರತಿದಿನವೂ ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಬಳಿ ಗಸ್ತು ಬರಲು ಡಿವೈಎಸ್‍ಪಿ ಬಳಿ ಚರ್ಚಿಸುತ್ತೇನೆ. ರಾತ್ರಿ ಪಾಳಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಪುರುಷ ವಾಚ್ ಮ್ಯಾನ್ ಕೊಡಿಸಲು ಹಾಗೂ ಎರಡು ವೈದ್ಯರ ಕೊರತೆ ಮತ್ತು ಆಸ್ಪತ್ರೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುವುದಾಗಿ ಹೇಳಿದರಲ್ಲದೆ ಇತ್ತೀಚೆಗೆ ಬಂದ ಮುಖ್ಯ ಆಡಳಿತ ವೈದ್ಯಾಧಿಕಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ಆಸ್ಪತ್ರೆಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಮಹಿಳಾ ನೌಕರರೊಬ್ಬರು ಕೆಲವು ಸಂಸ್ಥೆಗಳಿಗೆ ಹಾಗೂ ಆಸ್ಪತ್ರೆಗೆ ಸಾಮಾಗ್ರಿಗಳನ್ನು ಖರೀದಿಸಿ ಹಣವನ್ನು ನೀಡದೆ ವಂಚನೆ ಮಾಡಿದ್ದಾರೆ. ಈ ಹಿಂದೆ ಕೂಡಾ ಇತರ ಎರಡು ಕಡೆಗಳಲ್ಲಿ ಇದೇ ರೀತಿ ವಂಚನೆ ಮಾಡಿ ಅಮಾನತ್ತುಗೊಂಡಿದ್ದರು. ಮತ್ತೆ ಇದೇ ಕೆಲಸ ಇಲ್ಲಿಯೂ ಮಾಡಿದ್ದಾರೆಂದು ಸಭೆಯ ಗಮನಕ್ಕೆ ತರಲಾಯಿತು.

ತಕ್ಷಣವೇ ಲೆಕ್ಕ ಪರಿಶೋಧನೆ ಮಾಡಿ ಯಾರು ಹಣ ದುರುಪಯೋಗ ಮಾಡಿಕೊಂಡಿದ್ದಾರೋ ಅವರಿಂದ ಹಣ ಕೊಡಿಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯ ಆಡಳಿತ ವೈದ್ಯರಿಗೆ ಶಾಸಕರು ತಿಳಿಸಿದರು.
ವಂಚನೆಗೊಳಗಾದವರು ಸಭೆಯ ಗಮನಕ್ಕೆ ತಂದಾಗ ಶಾಸಕರು ಕಳೆದ ಮೂರು ವರ್ಷಗಳ ಬ್ಯಾಂಕ್ ದಾಖಲೆ ತೆಗೆದು ನಂತರ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನೇತ್ರ ತಜ್ಞರಾದ ಹೇಮಪ್ರಿಯ ಮಾತನಾಡಿದರು. ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಸೆಸ್ಕ್ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯ ಎಲ್ಲಾ ವೈದ್ಯರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!