ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 40ದೋಣಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಫಿಶಿಂಗ್ ಹಾರ್ಬರ್‌ನಲ್ಲಿರುವ ಘಾಟ್ ನಂ.1ರಲ್ಲಿ ಮಧ್ಯರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮೀನುಗಾರಿಕೆ ಬಂದರಿನ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಅಗ್ನಿ ಅವಘಡ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ಅಗ್ನಿಶಾಮಕ ಟಗ್ ಹಡಗಿನ ಮೂಲಕ ಬೆಂಕಿಯನ್ನು ಹತೋಟಿಗೆ ತಂದರು.
ಬೋಟ್‌ಗಳಲ್ಲಿ ಪೆಟ್ರೋಲ್ ಡೀಸೆಲ್ ಅನಿಲ ಪದಾರ್ಥಗಳು ಸಂಗ್ರಹವಾಗಿದ್ದ ಕಾರಣ ಭಾರಿ ಸ್ಫೋಟ ಸಂಭವಿಸಿದೆ. ಅಪಘಾತ ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರಿಕಾ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಣಹಾನಿ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ.
ಜೀವನಾಧಾರವಾಗಿದ್ದ ದೋಣಿಗಳು ಕಣ್ಣೆದುರೇ ಬೆಂಕಿಗೆ ಆಹುತಿಯಾಗಿ ಮೀನುಗಾರರ ಕುಟುಂಬಗಳು ತೀವ್ರ ದುಃಖದಲ್ಲಿ ಮುಳುಗಿವೆ. ಅಗ್ನಿಶಾಮಕ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಹತೋಟಿಗೆ ತಂದರು.