April 28, 2026
Tuesday, April 28, 2026
spot_img

ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಉರುಳಿ ಬಿದ್ದ ಬೃಹತ್ ಮರ: ತೀರ್ಥಹಳ್ಳಿ-ಉಡುಪಿ ರಸ್ತೆ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಸಂಪರ್ಕ ಕೊಂಡಿಯಾದ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಇಂದು ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಈ ಘಟನೆಯಿಂದಾಗಿ ತೀರ್ಥಹಳ್ಳಿ ಮತ್ತು ಉಡುಪಿ ನಡುವಿನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ಘಾಟಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ.

ದುರ್ಘಟನೆ ನಡೆದು ಇಷ್ಟು ಸಮಯವಾದರೂ ಸ್ಥಳಕ್ಕೆ ಯಾವುದೇ ಅರಣ್ಯ ಇಲಾಖೆ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ರಸ್ತೆಯಲ್ಲೇ ಸಿಲುಕಿಕೊಂಡಿರುವ ಲಾರಿ ಚಾಲಕರು ಮತ್ತು ಸಾರ್ವಜನಿಕರು ಮರ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮರವು ತುಂಬಾ ದೊಡ್ಡದಾಗಿರುವುದರಿಂದ ಅದನ್ನು ಮನುಷ್ಯ ಪ್ರಯತ್ನದಿಂದ ಸರಿಸುವುದು ಅಸಾಧ್ಯವಾಗಿದೆ.

ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಇನ್ನೂ ಕೆಲವು ಗಂಟೆಗಳ ಕಾಲಾವಕಾಶ ಬೇಕಾಗಬಹುದು. ಹಾಗಾಗಿ ಈ ಮಾರ್ಗವಾಗಿ ಪ್ರಯಾಣಿಸುವವರು ಸಾಧ್ಯವಾದರೆ ಪರ್ಯಾಯ ಮಾರ್ಗವನ್ನು ಬಳಸುವುದು ಸೂಕ್ತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !