ಅಂಕೋಲಾದಲ್ಲಿ ರಸ್ತೆಗುರುಳಿದ ಬೃಹತ್‌ ಮರ: ತಪ್ಪಿದ ಅನಾಹುತ

ಹೊಸ ದಿಗಂತ ವರದಿ ಅಂಕೋಲಾ:
ಪಟ್ಟಣದ ಕಿತ್ತೂರು ಚೆನ್ನಮ್ಮ ರಸ್ತೆಯ ಪೌರ ಕಾರ್ಮಿಕರ ಕಾಲನಿ ತಿರುವಿನಲ್ಲಿ ಇದ್ದ ಹಳೆಯ ಅರಳಿ ಮರ ತುಂಡಾಗಿ ರಸ್ತೆಗೆ ಬಿದ್ದು
ಕೆಲವು ಕಾಲ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದ್ದು ಮರ ಬೀಳುವ ಸಂದರ್ಭದಲ್ಲಿ ಯಾವುದೇ ರೀತಿಯ ಸಂಚಾರ ಇಲ್ಲದ ಕಾರಣ ಅಪಾಯ ಸಂಭವಿಸುವುದು ತಪ್ಪಿದಂತಾಗಿದೆ.
ಸುಮಾರು 200 ವರ್ಷಗಳಿಗೂ ಹಳೆಯ ಬೃಹತ್ ಮರ ಇದಾಗಿದ್ದು ಬುಧವಾರ ಬೆಳಗ್ಗಿನ ಜಾವ 5.30 ರ ಸುಮಾರಿಗೆ ಭಾರೀ ಸದ್ದಿನೊಂದಿಗೆ ತುಂಡಾಗಿ ರಸ್ತೆಗೆ ಬಿದ್ದಿದ್ದು ನಿದ್ದೆಯಲ್ಲಿದ್ದ ಅಕ್ಕ ಪಕ್ಕದ ಜನರು ಭಯಭೀತರಾಗಿ ಎಚ್ಚರಗೊಂಡು ಹೊರಗೆ ಓಡಿ ಬಂದಿದ್ದಾರೆ.

ತಪ್ಪಿದ ಅನಾಹುತ
ನಸುಕಿನಲ್ಲಿ ಹೆಚ್ಚಿನ ಜನ ಸಂಚಾರ, ವಾಹನಗಳ ಓಡಾಟ ಇಲ್ಲದ ಕಾರಣ ಯಾವುದೇ ರೀತಿಯ ಅನಾಹುತ, ಅಪಾಯ ಸಂಭವಿಸಿಲ್ಲ, ಮಳೆ ಬೀಳುವ ಸ್ವಲ್ಪ ಸಮಯದ ಮೊದಲು ಒಂದಿಬ್ಬರು ವಾಯು ವಿಹಾರಿಗಳು ಈ ಭಾಗದಿಂದ ವಾಯುವಿಹಾರಕ್ಕೆ ತೆರಳಿದ್ದು ಇನ್ನೂ ಕೆಲವರು ವಿಹಾರಕ್ಕೆ ಬರುವ ಮೊದಲೇ ಮರ ರಸ್ತೆಗೆ ಉರುಳಿದೆ ಎನ್ನಲಾಗಿದೆ.
ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಸದಾ ಜನ ಸಂಚಾರ ವಾಹನಗಳ ಓಡಾಟ ಸಾಮಾನ್ಯವಾಗಿದ್ದು ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಸಾರಿಗೆ ಸಂಸ್ಥೆಯ ವಾಹನಗಳು, ಶಾಲಾ ಕಾಲೇಜುಗಳ ವಾಹನಗಳ ಓಡಾಟ ಸೇರಿದಂತೆ ಪ್ರತಿದಿನ ನೂರಾರು ವಾಹನಗಳು ಈ ಭಾಗದಲ್ಲಿ ಓಡಾಡುತ್ತವೆ. ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರ್ಕಾರಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಬಸ್ ನಿಲ್ದಾಣ,ಸರ್ಕಾರಿ ಆಸ್ಪತ್ರೆ,ಇಂದಿರಾ ಕ್ಯಾಂಟೀನ್ ಘಟನಾ ಸ್ಥಳದಿಂದ ಅತಿ ಸಮೀಪದಲ್ಲಿ ಇರುವ ಕಾರಣ ಬೆಳಗಿನ ಜಾವದ ನಂತರ ಜನ ಸಂಚಾರ ಹೆಚ್ಚಾಗಿ ಕಂಡು ಬರುವುದರಿಂದ ಮರ ಬಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.

ತೆರುವು ಕಾರ್ಯಾಚರಣೆ
ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬಿದ್ದ ಮರ ತೆರುವು ಕಾರ್ಯಾಚರಣೆ ನಡೆಸಿದರು.
ಆಧುನಿಕ ಕಟಾವು ಯಂತ್ರ ಮತ್ತು ಜೆ.ಸಿ.ಬಿ ಬಳಸಿ ತ್ವರಿತವಾಗಿ ಮರ ತುಂಡರಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.
ಕಾರ್ಯಾಚರಣೆಗೆ ಅನುಕೂಲ ಆಗುವಂತೆ ಪಟ್ಟಣದಲ್ಲಿ ನಸುಕಿನಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಪಟ್ಟಣದಲ್ಲಿ ರಸ್ತೆ ಬದಿ ಅಪಾಯಕಾರಿ ರೀತಿಯಲ್ಲಿ ಇರುವ ಹಳೆಯ ಮರಗಳನ್ನು ಸುರಕ್ಷತಾ ದೃಷ್ಟಿಯಿಂದ ತೆರುವು ಗೊಳಿಸುವತ್ತ ಗಮನ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!