September 15, 2026
Tuesday, September 15, 2026
spot_img

ಗುರುಪುರ-ಕೈಕಂಬ-ಬಿಸಿ ರೋಡ್ ರಾಜ್ಯ ಹೆದ್ದಾರಿಯಲ್ಲಿಯೂ ಗುಡ್ಡ ಕುಸಿತ: ಕಾಜಿಲದಲ್ಲಿ ರಸ್ತೆಗೆ ಉರುಳಿಬಿದ್ದ ಮಣ್ಣು, ಬಂಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ–ಕೈಕಂಬ–ಬಿ.ಸಿ.ರೋಡ್ ರಾಜ್ಯ ಹೆದ್ದಾರಿಯ ಗುರುಪುರ–ಕೈಕಂಬ ನಡುವಿನ ಕಾಜಿಲ ಪ್ರದೇಶದಲ್ಲಿ ಮಂಗಳವಾರ ಭಾರೀ ಮಳೆಯಿಂದ ಗುಡ್ಡ ಕುಸಿದು ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ರಸ್ತೆಗೆ ಉರುಳಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಪೊಳಲಿ ದ್ವಾರ ಸಮೀಪದ ಕಡಿದಾದ ತಿರುವಿನಲ್ಲಿರುವ ಎತ್ತರದ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ಹಾಗೂ ಮುರ ಬಂಡೆಗಳು ರಸ್ತೆಗೆ ಜಾರಿಬಿದ್ದವು. ಗುಡ್ಡದ ಮೇಲ್ಭಾಗದಲ್ಲಿದ್ದ ಕೆಲವು ಬೃಹತ್ ಮರಗಳು ಸಹ ಕುಸಿಯುವ ಹಂತಕ್ಕೆ ತಲುಪಿದ್ದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಆಗಿತ್ತು. ಮರಗಳು ಉರುಳಿದ್ದರೆ ರಸ್ತೆ ಬದಿಯ ವಿದ್ಯುತ್ ತಂತಿಗಳು ಹಾಗೂ ಕಂಬಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು. ಮಾಹಿತಿ ತಿಳಿದ ತಕ್ಷಣ ಗುರುಪುರ–ಕೈಕಂಬ ವಿಭಾಗದ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಪಾಯಕಾರಿಯಾಗಿದ್ದ ಮರಗಳನ್ನು ತೆರವುಗೊಳಿಸಿದರು. ಈ ವೇಳೆ ಸುರಕ್ಷತಾ ಕಾರಣದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು.

ಇನ್ನೊಂದೆಡೆ, ರಸ್ತೆಗೆ ಬಿದ್ದಿದ್ದ ಮಣ್ಣು, ಬಂಡೆ ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಳಲಿ ದ್ವಾರದ ಬಳಿ ಬಜಪೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಇದನ್ನೂ ಓದಿ:

ಘಟನೆ ಬೆಳಗಿನ ವೇಳೆಯಲ್ಲಿ ಸಂಭವಿಸಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಕಚೇರಿಗಳಿಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು. ಪರಿಸ್ಥಿತಿಯಿಂದಾಗಿ ಗುರುಪುರ–ಕೈಕಂಬ ಹಾಗೂ ಪೊಳಲಿ ಮಾರ್ಗದಲ್ಲಿ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಲಾಗಿತ್ತು.

ರಸ್ತೆ ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಬಳಿಕ ಮಧ್ಯಾಹ್ನದ ವೇಳೆಗೆ ರಾಜ್ಯ ಹೆದ್ದಾರಿಯಲ್ಲಿ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ಪುನರಾರಂಭಿಸಲಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !