April 18, 2026
Saturday, April 18, 2026
spot_img

ಮೈದಾನದಲ್ಲಿ ನಾಯಕ.. ಬ್ಯಾಟಿಂಗ್‌ನಲ್ಲಿ ಸ್ಟೈಲಿಶ್! ಪಾಟಿದಾರ್ ಸ್ಕಿಲ್‌ಗೆ ಮಾರುಹೋದ ಅಯ್ಯರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಸೀಸನ್‌ನಲ್ಲೂ ತನ್ನ ವಿಜಯಯಾತ್ರೆಯನ್ನು ಮುಂದುವರೆಸಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಬೀಗುತ್ತಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲು ಹಾಕುತ್ತಿದೆ. ತಂಡದ ಈ ಸಂಘಟಿತ ಯಶಸ್ಸಿನ ಹಿಂದೆ ನಾಯಕ ರಜತ್ ಪಾಟಿದಾರ್ ಅವರ ದಕ್ಷ ನಾಯಕತ್ವದ ಪಾತ್ರ ದೊಡ್ಡದಿದೆ.

ಕಳೆದ ಸೀಸನ್‌ನಲ್ಲಿ ತಂಡಕ್ಕೆ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಟ್ಟಿದ್ದ ಪಾಟಿದಾರ್, ಈ ಬಾರಿಯೂ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇವರ ನಾಯಕತ್ವದ ಶೈಲಿಗೆ ಎದುರಾಳಿ ತಂಡಗಳ ನಾಯಕರೂ ಕೂಡ ಮನಸೋತಿದ್ದಾರೆ. ಕಳೆದ ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಎದುರು ಸೋತಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಇತ್ತೀಚೆಗೆ ‘ಜಿಯೋಹಾಟ್‌ಸ್ಟಾರ್’ ಯೂಟ್ಯೂಬ್ ಚಾನಲ್ ನೀಡಿದ ಸಂದರ್ಶನವೊಂದರಲ್ಲಿ ರಜತ್ ಪಾಟಿದಾರ್ ಅವರ ಗುಣಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಂದರ್ಶನದಲ್ಲಿ ಕೇಳಲಾದ 20 ಪ್ರಶ್ನೆಗಳ ಪೈಕಿ ಎರಡು ಪ್ರಮುಖ ಪ್ರಶ್ನೆಗಳಿಗೆ ಅಯ್ಯರ್ ಅವರು ರಜತ್ ಪಾಟಿದಾರ್ ಅವರ ಹೆಸರನ್ನೇ ಉತ್ತರವಾಗಿ ನೀಡಿದ್ದಾರೆ.

“ಐಪಿಎಲ್‌ನಲ್ಲಿ ನೀವು ಯಾವ ನಾಯಕನಿಂದ ಸಲಹೆ ಪಡೆಯಲು ಬಯಸುತ್ತೀರಿ?” ಎಂಬ ಪ್ರಶ್ನೆಗೆ ಅಯ್ಯರ್ ಅವರು ಯಾವುದೇ ಸಂಕೋಚವಿಲ್ಲದೆ “ರಜತ್ ಪಾಟಿದಾರ್” ಎಂದು ಉತ್ತರಿಸಿದ್ದಾರೆ. ಇದು ಪಾಟಿದಾರ್ ಅವರ ಗೇಮ್ ಪ್ಲಾನ್ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇನ್ನು ಪ್ರಸಕ್ತ ತಲೆಮಾರಿನ “ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್” ಯಾರು ಎಂಬ ಪ್ರಶ್ನೆಗೂ ಅಯ್ಯರ್ ಅವರು ಪಾಟಿದಾರ್ ಅವರ ಹೆಸರನ್ನೇ ಸೂಚಿಸಿದ್ದಾರೆ.

ಒಟ್ಟಿನಲ್ಲಿ ಮೈದಾನದಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಶಾಂತಚಿತ್ತದ ನಾಯಕತ್ವದ ಮೂಲಕ ರಜತ್ ಪಾಟಿದಾರ್ ಈಗ ಐಪಿಎಲ್‌ನ ಹೊಸ ಐಕಾನ್ ಆಗಿ ಹೊರಹೊಮ್ಮುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !