July 26, 2026
Sunday, July 26, 2026
spot_img

ಶೌಚಾಲಯದಲ್ಲೇ ರಾತ್ರಿ ಕಳೆದ ಚಿರತೆ: ಸೆರೆಗೆ ಮಾಡಿಗುಂಜಿ ಗ್ರಾಮಸ್ಥರ ಆಗ್ರಹ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಚಿರತೆಯೊಂದು ಸತತವಾಗಿ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕ ಹಾಗೂ ಭೀತಿಯ ನೆರಳಿನಲ್ಲಿ ಕಾಲ ಕಳೆಯುವಂತಾಗಿದೆ.

ನಿನ್ನೆ ಶನಿವಾರ ರಾತ್ರಿ ಗ್ರಾಮದ ಪ್ರಸಾದ್ ಘಾಡಿ ಎಂಬುವರ ಮನೆಯ ಶೌಚಾಲಯದೊಳಗೆ ನುಗ್ಗಿದ ಚಿರತೆ, ರಾತ್ರಿ ಪೂರ್ತಿ ಅಲ್ಲೇ ಅಡಗಿ ಕುಳಿತಿತ್ತು. ಬೆಳಿಗ್ಗೆ ಮನೆಯವರು ಶೌಚಾಲಯದತ್ತ ಹೋದಾಗ ಏಕಾಏಕಿ ಚಿರತೆ ಪ್ರತ್ಯಕ್ಷವಾಗಿದ್ದು, ಕ್ಷಣಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದವರು ಸದ್ದು ಗದ್ದಲ ಮಾಡುತ್ತಿದ್ದಂತೆ ಚಿರತೆ ಶೌಚಾಲಯದಿಂದ ಹೊರಬಿದ್ದು ಸಮೀಪದ ಅರಣ್ಯದತ್ತ ಓಡಿಹೋಗಿದೆ.

ಮಾವುಲಿ ದೇವಾಲಯದ ಬಳಿಯೂ ಪ್ರತ್ಯಕ್ಷ:

ಚಿರತೆಯು ಕೇವಲ ವಸತಿ ಪ್ರದೇಶದಲ್ಲಿ ಮಾತ್ರವಲ್ಲದೆ, ಮಾಡಿಗುಂಜಿಯ ಪ್ರಸಿದ್ಧ ಮಾವುಲಿ ದೇವಾಲಯದ ಆವರಣದಲ್ಲೂ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸ್ಥಳೀಯರಲ್ಲಿ ತೀವ್ರ ಭಯದ ವಾತಾವರಣ ಆವರಿಸಿದೆ.

ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ:

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನು ಅಳವಡಿಸಲಾಗಿದ್ದು, ಗಸ್ತು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಆದಾಗ್ಯೂ ಚಿರತೆ ಇನ್ನೂ ಇಲಾಖೆಯ ಕೈಗೆ ಸಿಗದೇ ಇರುವುದು ಗ್ರಾಮಸ್ಥರ ನಿದ್ರೆ ಕೆಡಿಸಿದ್ದು, ಆದಷ್ಟು ಬೇಗ ಚಿರತೆಯನ್ನು ಬಂಧಿಸಿ ಭೀತಿಯಿಂದ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !