ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲೀಗ ಚುನಾವಣಾ ಪರ್ವ. ಈಗಾಗಲೇ ಫಲಿಂತಾಶಗಳು ಹೊರ ಬಿದ್ದಿದ್ದು ಅಮೆರಿಕದ ಸೆನೆಟ್ ಡೆಮೋಕ್ರಾಟಿಕ್ ಪಕ್ಷದ ಹಿಡಿತದಲ್ಲಿಯೇ ಉಳಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಆದರೆ ಇನ್ನೂ ಕೂಡ ಎಲ್ಲ ಕಡೆಗಳಲ್ಲಿ ಫಲಿತಾಂಶಗಳು ಹೊರಬಿದ್ದಿಲ್ಲ ಎನ್ನುವುದು ಮೇಲ್ನೋಟಕ್ಕೆ ಢಾಳಾಗಿ ಗೋಚರಿಸುತ್ತದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ, ಅತಿ ಹಳೆಯ ಪ್ರಜಾಪ್ರಭುತ್ವ ಎಂತಲೂ ಕೆರಕೊಳ್ಳುವ ಅಮೆರಿಕವು ಮತಪತ್ರಗಳನ್ನು ಎಣಿಸಲು ಮತ್ತು ಚುನಾವಣೆಗಳನ್ನು ನಿರ್ಧರಿಸಲು ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.
ನವೆಂಬರ್ 8 ಕ್ಕೇ ಮತದಾನ ಪ್ರಕ್ರಿಯೆಗಳು ಮುಗಿದರೂ ಇನ್ನೂ ಕೂಡ ಹಲವೆಡೆ ಫಲಿತಾಂಶಗಳಲ್ಲಿ ವಿಳಂಬವಾಗುತ್ತಿದೆ. ಇದು ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತದೆ. ಈ ಎಲ್ಲ ಹಿನ್ನೆಲೆಯಿಂದ ನೋಡಿದಾಗ ಅಮೆರಿಕವು ಭಾರತದಿಂದ ಚುನಾವಣೆಗಳನ್ನು ಹೇಗೆ ನಡೆಸಬೇಕೆಂಬ ಪಾಠ ಕಲಿತುಕೊಳ್ಳಬೇಕಿದೆ. ಏಕೆಂದರೆ ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೂ ಹೌದು. ಆದರೂ ಭಾರತದಲ್ಲಿ ಇದುವರೆಗೂ ಯಾವುದೇ ಗೊಂದಲಗಳಿಲ್ಲದೇ ಚುನಾವಣೆಗಳು ಸರಾಗವಾಗಿಯೇ ನಡೆಯುತ್ತವೆ. ಇದುವರೆಗೂ 17 ಸಂಸದೀಯ ಚುನಾವಣೆಗಳು ಹಾಗೆಯೇ ಹಲವಾರು ಇತರ ಚುನಾವಣೆಗಳೂ ಯಶಸ್ವಿಯಾಗಿ ನಡೆಯಲ್ಪಟ್ಟಿದೆ.
ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿನ ತೊಡಕುಗಳೇನು ?
ಭಾರತ ಹಾಗು ಅಮೆರಿಕದ ಚುನಾವಣಾ ವ್ಯವಸ್ಥೆಗಳನ್ನು ಗಮನಿಸಿದಾಗ ಎರಡರ ನಡುವೆ ಅಜಗಜಾಂತರ ವ್ಯತ್ಯಾಸಗಳು ಗೋಚರಿಸುತ್ತವೆ. ಅಮೆರಿಕದಲ್ಲಿ ಚುನಾವಣೆಗಳನ್ನು ನಡೆಸಲು ಯಾವುದೇ ಕೇಂದ್ರೀಯ ವ್ಯವಸ್ಥೆಯೇ ಇಲ್ಲ. ಬದಲಾಗಿ ಆಯಾ ರಾಜ್ಯದ ಗವರ್ನರ್ ಗಳು ಹಾಗೆಯೇ ರಾಜ್ಯಕಾರ್ಯದರ್ಶಿಗಳು ಚುನಾವಣಾ ಅಧಿಕಾರ ಹೊಂದಿದ್ದಾರೆ. ಚುನಾವಣೆಗಳ ಕುರಿತಾಗಿ ರಾಜ್ಯಗಳ ನಡುವೆಯೇ ಬಹಳಷ್ಟು ಭಿನ್ನತೆಗಳಿವೆ. ಕೆಲವು ರಾಜ್ಯಗಳಲ್ಲಿ ಇವಿಎಂಗಳಿದ್ದರೆ ಕೆಲವು ಇನ್ನೂ ಬ್ಯಾಲೆಟ್ ಪೇಪರ್ ಗಳನ್ನು ಬಳಸುತ್ತವೆ. ಕೆಲವೆಡೆ ಚುನಾವಣೆಗೂ ಮುಂಚಿತವಾಗಿಯೇ ಮತದಾನ ಮಾಡಬಹುದು. ಕೆಲವೆಡೆ ಚುನಾವಣೆಯ ದಿನ ಮಾತ್ರ ಮತದಾನ ಮಾಡಬಹುದು. ಹೀಗಾಗಿ ಚುನಾವಣೆ ಪ್ರಕ್ರಿಯೆಗೆ ಏಕರೂಪತೆಯೆಂಬುದೇ ಇಲ್ಲ. ಕೆಲವು ರಾಜ್ಯಗಳು ಕೆಲ ಗಂಟೆಗಳಲ್ಲಿ ಫಲಿತಾಂಶ ನೀಡಿದರೆ ಕೆಲವು ರಾಜ್ಯಗಳುಹಲವಾರು ದಿನ ಸಮಯ ತೆಗೆದುಕೊಳ್ಳುತ್ತವೆ. ಹೀಗಾಗಿ ಚುನಾವಣೆಯ ಕುರಿತಾಗಿನ ಗೊಂದಲಗಳಿಗೆ ಇದು ಕಾರಣವಾಗುತ್ತದೆ.
ಭಾರತದಿಂದ ಕಲಿಯಬೇಕಿರುವ ಅಂಶಗಳು
ಆದರೆ ಭಾರತದಲ್ಲಿ ಈ ಥರದ ಯಾವುದೇ ಸಮಸ್ಯೆಗಳಿಲ್ಲ. ಚುನಾವಣೆಗಳನ್ನು ಕೈಗೊಳ್ಳಲೆಂದೇ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತದೆ. ಪಾರದರ್ಶಕ ಚುನಾವಣೆಗಳನ್ನು ನಡೆಸಬೇಕಿರುವುದೊಂದೇ ಅದರ ಕರ್ತವ್ಯ. ಹೀಗಾಗಿ ನಿರ್ದಿಷ್ಟ ಪಡಿಸಿದ ದಿನದಂದು ದೇಶದ ಮೂಲೆ ಮೂಲೆಗಳಲ್ಲೂ ಚುನಾವಣೆಗಳನ್ನು ನಡೆಸಲಾಗುತ್ತದೆ. ಚುನಾವಣೆಗಳನ್ನು ನಡೆಸುವಲ್ಲಿ ರಾಜಕೀಯ ಕಾರ್ಯಕಾರಿಣಿಗೆ ಯಾವುದೇ ಅಧಿಕಾರವೂ ಇರುವುದಿಲ್ಲ. ಹೀಗಾಗಿ ಇದು ಪ್ರಜಾಫ್ರಭುತ್ವದ ʼಮುಕ್ತʼ ಹಾಗೂ ಪಾರದರ್ಶಕ ಚುನಾವಣೆಗಳಿಗೆ ಮಾದರಿಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ಬಹಳ ಮಹತ್ವದ್ದು. ಹೀಗಾಗಿ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತೀ ಅಗತ್ಯವಾದದ್ದು. ಈ ಹಿನ್ನೆಲೆಯಲ್ಲಿ ಅಮೆರಿಕವು ಭಾರತಕ್ಕಿಂತ ಆರ್ಥಿಕವಾಗಿ ಎಷ್ಟೇ ಬಲಿಷ್ಟವಾಗಿದ್ದರೂ ಚುನಾವಣೆಯ ವಿಷಯಕ್ಕೆ ಬಂದಾಗ ಭಾರತವನ್ನು ನೋಡಿ ಅಮೆರಿಕ ಕಲಿತುಕೊಳ್ಳಬೇಕಿದೆ.