ಸಂಗೊಳ್ಳಿ ಗಣೇಶ ಜೋಶಿ
ಕುಮಟಾ: ಖ್ಯಾತ ನಿರೂಪಕ, ಶಿಕ್ಷಕ ರವೀಂದ್ರ ಭಟ್ಟ ಸೂರಿ ಅವರು ಇಹಲೋಕ ತ್ಯಜಿಸಿದ ತಮ್ಮ ತಾಯಿಯ ಪ್ರೀತಿಯನ್ನು ಸದಾ ನೆನಪಿಸುವ ಕಾರ್ಯಕ್ಕೆ ಮುಂದಾಗಿದ್ದು, ತಾಲೂಕಿನ ಹೆಗಡೆಯಲ್ಲಿ “ಆಯಿ ಪುಸ್ತಕ ಮನೆ” ಎನ್ನುವ ಗ್ರಂಥಾಲಯವನ್ನು ತಮ್ಮ ಮನೆಯಲ್ಲೇ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಎಲ್ಲಿ ಹೋದರೂ ಪುಸ್ತಕ ತಂದು ಕೊಡುವ ಮೂಲಕ ಮಗ ರವೀಂದ್ರ ಭಟ್ಟ ಸೂರಿ ತಾಯಿಯ ಪುಸ್ತಕ ಪ್ರೀತಿಗೆ ಪೂರಕವಾಗಿರುತ್ತಿದ್ದರು. ಹೀಗೆ ಮನೆಯಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹವಾಯಿತು. ವಯೋಸಹಜವಾಗಿ ತಾಯಿ ನಿಧನರಾದಾಗ ತಾಯಿಯ ವೈಕುಂಠ ಸಮಾರಾಧನೆಯ ದಿನದಂದು ಅವರು ನಿತ್ಯ ಓದುತ್ತಿದ್ದ ಸ್ತೋತ್ರಗಳ ಸಂಗ್ರಹದ ಪುಸ್ತಕ ಮುದ್ರಿಸಿ ಬಂದ ಜನರಿಗೆಲ್ಲ ಉಚಿತವಾಗಿ ನೀಡಿದ ರವೀಂದ್ರ ಭಟ್ಟ ಸೂರಿ ಅವರು ತಾಯಿಯ ವರ್ಷಾಂತಿಕದ ದಿನ ಆಯಿ ಪುಸ್ತಕ ಮನೆ ಹೆಸರಿನ ಗ್ರಂಥಾಲಯವನ್ನು ಮನೆಯಲ್ಲಿ ವೈದಿಕರಿಂದ ಉದ್ಘಾಟಿಸುವ ಮೂಲಕ ಪುಸ್ತಕ ರೂಪದಲ್ಲಿ ತಾಯಿಯನ್ನು ಕಾಣುತ್ತಿದ್ದಾರೆ.
ಪ್ರಸ್ತುತ ಆಯಿ ಪುಸ್ತಕ ಮನೆಯಲ್ಲಿ 3 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು, ಚಿಂತನ ಬರೆಹಗಳು, ಧಾರ್ಮಿಕ ಚಿಂತನೆಗಳು, ಮಕ್ಕಳ ಪುಸ್ತಕಗಳು, ವಿವಿಧ ಭಾಷಾ ಕೃತಿಗಳು, ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳ ಸಂಗ್ರಹ ಇಲ್ಲಿ ಕಾಣಬಹುದು. ಆಸಕ್ತ ಪುಸ್ತಕ ಪ್ರೇಮಿಗಳಿಗೆ ಪುಸ್ತಕ ಓದಲು ನೀಡುವ ಅವರು, ಸಾರ್ವಜನಿಕ ಗ್ರಂಥಾಲಯ ಮಾದರಿಯಲ್ಲೇ ಈ ಪುಸ್ತಕ ಮನೆ ರೂಪಿಸಿರುವುದು ವಿಶೇಷವಾಗಿದೆ.
ನನ್ಮ ಆಯಿ ಭೌತಿಕವಾಗಿ ಜೊತೆಗೆ ಇಲ್ಲದಿದ್ದರೂ, ಪುಸ್ತಕ ರೂಪದಲ್ಲಿ ನನ್ನ ಜೊತೆ ಇದ್ದಾರೆ. ಪುಸ್ತಕ ಮನೆಗೆ ಹೋದಾಗಲೆಲ್ಲ ನನ್ನ ಆಯಿ ಮಾತನಾಡಿಸಿದ ಅನುಭವವಾಗುತ್ತದೆ ಎಂದು ರವೀಂದ್ರ ಭಟ್ಟ ಸೂರಿ ತಿಳಿಸಿದ್ದಾರೆ.