ಕೋವಿ ಹಕ್ಕು ಗೊಂದಲ: ಕೊಡವ ಸಮಾಜಗಳ ಮುಖಂಡರಿಂದ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ

ಹೊಸದಿಗಂತ ವರದಿ, ಮಡಿಕೇರಿ:

ಕೋವಿ ಹಕ್ಕು ಗೊಂದಲ ಹಾಗೂ ಕೊಡಗಿನ ಇತರ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸುವುದರೊಂದಿಗೆ ಮನವಿ ಸಲ್ಲಿಸಿದವು.
ಸುಮಾರು ಒಂದು ಗಂಟೆಗಳ ಕಾಲ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಪ್ರಮುಖರು, ಕೊಡವರು ಹಾಗೂ ಕೋವಿಯ ನಡುವಿನ ಬಾಂಧವ್ಯ ಮತ್ತು ಕೂರ್ಗ್ ಬೈ ರೇಸ್ ಎಂದರೆ ಯಾರು ಮತ್ತು ಹೇಗೆ ಎಂಬ ಬಗ್ಗೆ ಮನದಟ್ಟು ಮಾಡಿಕೊಟ್ಟರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದ ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಜಿಲ್ಲಾಧಿಕಾರಿಗಳು ಅಹವಾಲು ಆಲಿಸಿದರು.
ಸಾಧಕ-ಬಾಧಕ ಚರ್ಚಿಸಿ ವರದಿ: ಬಳಿಕ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಸರಕಾರದ ಮುಖ್ಯ ಕಾರ್ಯದರ್ಶಿಗಳು ತಮಗೆ ಪತ್ರ ಬರೆದು ಕೇಳಿದ ಪ್ರಶ್ನೆಗೆ ಹಳೆಯ ದಾಖಲೆಗಳನ್ನು ಹಾಗೂ ಒಂದಷ್ಟು ಮಾಹಿತಿ ನೀಡಲಾಗಿದೆಯೇ ಹೊರತು ಎಲ್ಲಿಯೂ ಸಂಪೂರ್ಣ ವರದಿಯನ್ನು ಸಲ್ಲಿಸಲಾಗಿಲ್ಲ. ನಾನೂ ಜಿಲ್ಲೆಗೆ ಹೊಸದಾಗಿ ಬಂದಿರುವ ಕಾರಣ ಹಾಗೂ ನನಗೆ ಕೊಡಗಿನ ಹಲವಾರು ಸಮಸ್ಯೆಗಳ ಬಗ್ಗೆ ಹಾಗೂ ಕೋವಿ ವಿಷಯವಾಗಿ ಸಂಪೂರ್ಣ ಮಾಹಿತಿ ಇಲ್ಲದಿರುವ ಕಾರಣ ಮುಂದಿನ ದಿನಗಳಲ್ಲಿ ಹಲವಾರು ಸಭೆ ನಡೆಸಿ ಸಾಧಕ ಬಾಧಕಗಳನ್ನು ಚರ್ಚಿಸಿ ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ವರದಿ ನೀಡಲಾಗುತ್ತದೆ ಹೊರತು ಏಕಾಏಕಿ ಯಾವ ನಿರ್ಧಾರವನ್ನೂ ಕೈಗೊಳ್ಳಲಾಗುವುದಿಲ್ಲ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!