ಅಬ್ಬಬ್ಬಾ ಲಾಟ್ರಿ..! ಕನಸಲ್ಲಿ ಕಂಡ ನಂಬರಿನ ಟಿಕೆಟ್‌ ಕೊಂಡ ವ್ಯಕ್ತಿಗೆ 1.96 ಕೋಟಿ ಜಾಕ್‌ಪಾಟ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನಿಮಗೂ ಹೀಗೆ ಅನ್ನಿಸಿರಬಹುದು. ಅನೇಕ ಜನರಿಗೆ ಪ್ರಸ್ತುತ ತಮ್ಮ ಬದುಕಿನಲ್ಲಿ ಘಟಿಸುತ್ತಿರುವ ಘಟನೆ ಈ ಹಿಂದೆಯೇ ತಮ್ಮ ಅನುಭವಕ್ಕೆ ಬಂದಿದ್ದಾಗಿ, ಕನಸಿನ ರೂಪದಲ್ಲಿ ಆ ಎಲ್ಲಾ ಸಂಗತಿಯನ್ನು ಕಂಡದ್ದಾಗಿ ಅನ್ನಿಸುತ್ತಿರುತ್ತಿದೆ. ನಿಜವಾಗಿಯೂ ಆ ಘಟನೆ ನಡೆದಾಗ ಈ ಹಿಂದೆಯೇ ಆ ಬಗ್ಗೆ ಸೂಚನೆ ಸಿಕ್ಕಿತ್ತಲ್ಲ ಎಂಬ ಆಲೋಚನೆ ಪಕ್ಕನೆ ಹಾದುಹೋಗುತ್ತದೆ. ಈ ವಿಚಾರವನ್ನು ಹಲವರು ಒಪ್ಪುವುದಿಲ್ಲವಾದರೂ, ಸುಪ್ತ ಮನಸ್ಸಿಗೆ ಎಲ್ಲವೂ ತಿಳಿದಂತೆ ಭಾಸವಾಗುವ ಸಂಗತಿಗಳು ನಿಜಜೀವನದಲ್ಲಿಯೂ ಸಂಭವಿಸಿದ ಅನೇಕಾ ಉದಾಹರಣೆಗಳಿವೆ.
ಅಮೆರಿಕದಲ್ಲಿಯೂ ಅಂತಹದ್ದೇ ಒಂದು ಅಚ್ಚರಿಯ ಘಟನೆ ಸಂಭವಿಸಿದೆ. ಅಲ್ಲಿನ ವ್ಯಕ್ತಿಯೊಬ್ಬ  ಇತ್ತೀಚೆಗೆ ಕನಸಿನಲ್ಲಿ ಕಾಣಿಸಿಕೊಂಡಿದ್ದ ಸಂಖ್ಯೆಗಳನ್ನೇ ಬಳಸಿಕೊಂಡು ಭಾರಿ ಮೊತ್ತದ ಲಾಟರಿ ಬಹುಮಾನವನ್ನು ಗೆದ್ದಿದ್ದಾನೆ.
ವರ್ಜೀನಿಯಾದ ಹೆನ್ರಿಕೊದ ನಿವಾಸಿ ಅಲೋಂಜೊ ಕೋಲ್‌ಮನ್ ಎಂಬಾತ ಅಂತಹ ಅದೃಷ್ಟಶಾಲಿ ವ್ಯಕ್ತಿ. ಕೋಲ್‌ಮನ್ ಜೂನ್‌ 11ರಂದು ತಾವು ಲಾಟರಿ ಕೊಳ್ಳುವಾಗ ತಮ್ಮ ಕನಸಿನಲ್ಲಿ ಕಂಡಿದ್ದ 13-14-15-16-17-18  ಈ ಆರು, ವಿಚಿತ್ರ ಅನುಕ್ರಮ ಸಂಖ್ಯೆಗಳನ್ನು ಆರಿಸಿಕೊಂಡಿದ್ದರು. ಗುರುವಾರ ಲಾಟರಿ ಫಲಿತಾಂಶವನ್ನು ನೀಡಿದಾಗ ಕೋಲ್‌ ಮನ್‌ ಗೆ ತನ್ನ ಕಣ್ಣನ್ನು ತಾನೇ ನಂಬಲು ಸಾಧ್ಯವಾಗಿರಲಿಲ್ಲ. ಅವರಿಗೆ ಬರೋಬ್ಬರಿ 250,000 ಡಾಲರ್ (ಸುಮಾರು ರೂ 1.96 ಕೋಟಿ) ಲಾಟರಿ ಹೊಡೆದಿತ್ತು. ಈ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿರುವ ಕೋಲ್ಮಾನ್ “‌ ಕನಸ್ಸಿನಲ್ಲಿ ಕಂಡದ್ದು ನಿಜವಾಗಿರುವುದು ನಂಬಲು ಅಸಾಧ್ಯವಾಗಿದೆ!”ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!