24 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕಾಶಿಯಲ್ಲಿ ಪತ್ತೆ

ಹೊಸದಿಗಂತ ವರದಿ, ವಿಜಯಪುರ:

ಜಿಲ್ಲೆಯ ಗ್ರಾಮವೊಂದರಿಂದ 24 ವರ್ಷಗಳ ಹಿಂದೆ ದಿಢೀರನೇ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಾಶಿಯಲ್ಲಿ ಕಾವಿ ಬಟ್ಟೆಯಲ್ಲಿ ಪ್ರತ್ಯಕ್ಷನಾಗಿದ್ದು, ಆತನನ್ನು ಗ್ರಾಮಸ್ಥರು ಗುರುತು ಹಿಡಿದು ಮರಳಿ ಸ್ವಗ್ರಾಮಕ್ಕೆ ಕರೆತಂದಿರುವ ಅಪರೂಪದ ಘಟನೆ ನಡೆದಿದೆ.

ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ರಮೇಶ ದುಂಡಪ್ಪ ಚೌಧರಿ ಮರಳಿ ಸ್ವಗ್ರಾಮಕ್ಕೆ ಬಂದ ವ್ಯಕ್ತಿ.
ರಮೇಶ ದುಂಡಪ್ಪ ಚೌಧರಿ ಈತ ಕಳೆದ 2001 ರಲ್ಲಿ ಗ್ರಾಮದಿಂದ ದಿಢೀರನೇ ನಾಪತ್ತೆಯಾಗಿದ್ದ. ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ರಮೇಶ ಚೌಧರಿ ಪತ್ತೆಯಾಗಿರಲಿಲ್ಲ. ಬಳಿಕ ಕುಟುಂಬಸ್ಥರು ಆತನನ್ನು ಮರತೇ ಬಿಟ್ಟಿದ್ದರು. ಆಕಸ್ಮಿಕವಾಗಿ ಗ್ರಾಮದ ಯಾತ್ರಿಕರ ಕಣ್ಣಿಗೆ ಬಿದ್ದು ಮತ್ತೆ ಊರು ಸೇರುವಂತಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿ ನಂತರ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಜಿಲ್ಲೆಯ ಬಳೂತಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬವರು ಸ್ನೇಹಿತರೊಡನೆ ತೆರಳಿದ್ದರು. ಈ ಸಂದರ್ಭದಲ್ಲಿ ರಮೇಶನನ್ನು ಕಂಡು ಸೂಕ್ಷ್ಮವಾಗಿ ಗಮನಿಸಿದ್ದು, ಆತನ ಪೂರ್ವಾಪರ ವಿಚಾರಿಸಿದ್ದಾರೆ. ನಂತರ ಅಸ್ಪಷ್ಟ ಕನ್ನಡದಲ್ಲಿ, ತಾನು ಬಳೂತಿ ಗ್ರಾಮದವನು ಎಂದು ಒಪ್ಪಿಕೊಂಡಿದ್ದಾನೆ.

ಅಲ್ಲದೆ ತನ್ನ ಪೂರ್ವಾಪರ, ತಂದೆ, ತಾಯಿ ಹಾಗೂ ಕುಟುಂಬಸ್ಥರ ಹೆಸರುಗಳನ್ನು ಕೂಡ ಹೇಳಿದ್ದಾನೆ. ಕೂಡಲೇ ಮಲ್ಲನಗೌಡ ಪಾಟೀಲ ಅವರು ರಮೇಶನ ಕುಟುಂಬಸ್ಥರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ರಮೇಶ ಸಿಕ್ಕಿರುವ ವಿಷಯ ತಿಳಿಸಿದ್ದಾರೆ. ಕುಟುಂಬಸ್ಥರು ವಿಡಿಯೋ ಕಾಲ್ ಮೂಲಕ ರಮೇಶನನ್ನು ಮಾತಾಡಿಸಿದ್ದು, ಮಲ್ಲನಗೌಡರು ತಮ್ಮ ವಾಹನದಲ್ಲೇ ರಮೇಶನನ್ನು ಬಳೂತಿ ಗ್ರಾಮಕ್ಕೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಸುಮಾರು 24 ವರ್ಷಗಳ ಹಿಂದೆ ಕಳೆದುಹೋಗಿದ್ದ ರಮೇಶ ಚೌಧರಿ ಬಳೂತಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದು, ರಮೇಶನ ಮನೆಯಲ್ಲಿ ಸಂಭ್ರಮ ಮೂಡುವಂತಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!