ಹೊಸದಿಗಂತ ವರದಿ, ಶಿರಸಿ:
ಮಂಗನ ಕಾಯಿಲೆ ಮತ್ತೆ ವಕ್ಕರಿಸಿದ್ದು, ತಾಲೂಕಿನ ಬಲವಳ್ಳಿ ಭಾಗದ ವ್ಯಕ್ತಿಯೋರ್ವನಿಗೆ ಮಂಗನ ಖಾಯಿಲೆ ಇರುವಿಕೆ ಮಂಗಳವಾರ ದೃಢಪಟ್ಟಿದೆ.
51 ವರ್ಷದ ವ್ಯಕ್ತಿಗೆ ಕಳೆದ ಫೆ.20ಕ್ಕೆ ಜ್ವರ ಹಾಗೂ ಮೈಕೈ ನೋವು, ತಲೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ರೇವಣಕಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದ ಬಳಿಕ ಶಂಕೆಗೊಂಡ ವೈದ್ಯರು ಈತನ ರಕ್ತ ಮಾದರಿಯನ್ನು ಶಿವಮೊಗ್ಗದಲ್ಲಿನ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು. ರಕ್ತ ಮಾದರಿಯಲ್ಲಿ ಕೆಎಫ್ ಡಿ ಖಾಯಿಲೆ ಪತ್ತೆಯಾಗಿದೆ.
ವ್ಯಕ್ತಿಗೆ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾನೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಭಟ್ಟ ಕಣ್ಣಿ ಮಾಹಿತಿ ನೀಡಿದ್ದಾರೆ.
ಸೊರಬ ಸಾಗರ ಮಾರ್ಗದ ಕ್ಯಾಸನೂರಿನಲ್ಲಿ ಮೊದಲು ಕಾಣಿಸಿಕೊಂಡ ಮಂಗನ ಖಾಯಿಲೆ ಸಿದ್ದಾಪುರ, ಸಾಗರ, ಹೊನ್ನಾವರ ಭಾಗದಲ್ಲಿ ಹೆಚ್ಚಿತ್ತು. ಇದೀಗ ಶಿರಸಿ ಭಾಗದಲ್ಲಿ ಪ್ರಥಮ ಪ್ರಕರಣ ದಾಖಲಾದಂತಾಗಿದೆ.