February 17, 2026
Tuesday, February 17, 2026
spot_img

ನಿವೃತ್ತಿಗೆ ನಾಲ್ಕೇ ತಿಂಗಳು ಬಾಕಿ ಇರುವಾಗ ವಿಧಿಯಾಟ: ಬೆಳಗಾವಿ ಯೋಧ ಪಂಜಾಬ್‌ನಲ್ಲಿ ಹುತಾತ್ಮ

ಹೊಸದಿಗಂತ ಬೆಳಗಾವಿ:

ಪಂಜಾಬ್‌ನ ಬಟಿಂದಾದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆಎಚ್ ಗ್ರಾಮದ ಯೋಧ ಜಗದೀಶ ಮನೋಹರ ಶಿಂಧೆ (40) ಅವರು ವೀರಮರಣವನ್ನಪ್ಪಿದ್ದಾರೆ.

ಕಳೆದ 24 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಗದೀಶ ಅವರು ಪ್ರಸ್ತುತ ಬಟಿಂದಾದ ಆರ್ಮಿ ಏರ್ ಡಿಫೆನ್ಸ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಕೇವಲ ನಾಲ್ಕು ತಿಂಗಳಲ್ಲಿ ಸೇವಾ ನಿವೃತ್ತಿ ಪಡೆದು ತವರಿಗೆ ಮರಳಬೇಕಿದ್ದ ಯೋಧ, ಅಪಘಾತದ ರೂಪದಲ್ಲಿ ಬಂದ ಸಾವಿಗೆ ಬಲಿಯಾಗಿದ್ದಾರೆ. ಮೃತ ಯೋಧನ ಸಹೋದರ ಕೂಡ ಸೇನೆಯಲ್ಲಿದ್ದು, ಇಡೀ ಕುಟುಂಬ ದೇಶಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿತ್ತು.

ಯೋಧನ ಪಾರ್ಥಿವ ಶರೀರವು ಇಂದು ದೆಹಲಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಪತ್ನಿ ಹಾಗೂ ಇಬ್ಬರು ಪುತ್ರರು ಪಾರ್ಥಿವ ಶರೀರದ ಜೊತೆಯಲ್ಲೇ ಆಗಮಿಸುತ್ತಿದ್ದು, ಅಲ್ಲಿಂದ ಮೆರವಣಿಗೆಯ ಮೂಲಕ ಸ್ವಗ್ರಾಮವಾದ ಕಂಗ್ರಾಳಿ ಕೆಎಚ್‌ಗೆ ಒಯ್ಯಲಾಗುವುದು. ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರ ಯೋಧನ ಅಂತ್ಯಸಂಸ್ಕಾರ ನೆರವೇರಲಿದೆ. ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಜಗದೀಶ ಅವರ ನಿಧನದಿಂದ ಗ್ರಾಮದಲ್ಲಿ ಮೌನ ಆವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !