July 23, 2026
Thursday, July 23, 2026
spot_img

ರನ್‌ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಅತಿ ದೊಡ್ಡ ಆಘಾತ: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ದಾಖಲೆಯ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 125 ರನ್‌ಗಳ ಹೀನಾಯ ಸೋಲು ಕಂಡಿದೆ. ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡವು ತನ್ನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಮಹಾ ಕುಸಿತದೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ದಾಖಲಾದ ಐದು ಪ್ರಮುಖ ಅನಪೇಕ್ಷಿತ ದಾಖಲೆಗಳ ವಿವರ ಇಲ್ಲಿದೆ:

1. ರನ್‌ಗಳ ಲೆಕ್ಕದಲ್ಲಿ ಅತಿ ದೊಡ್ಡ ಸೋಲು

ಇದು ರನ್‌ಗಳ ಅಂತರದಲ್ಲಿ ಭಾರತಕ್ಕೆ ಎದುರಾದ ಬೃಹತ್ ಸೋಲಾಗಿದೆ. 2019ರಲ್ಲಿ ನ್ಯೂಝಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ 80 ರನ್‌ಗಳಿಂದ ಸೋತಿದ್ದು ಹಳೆಯ ದಾಖಲೆಯಾಗಿತ್ತು. ಈಗ 125 ರನ್‌ಗಳ ಅಂತರದ ಸೋಲು ಆ ಕಪ್ಪು ಚುಕ್ಕೆಯನ್ನು ಮರೆಸಿದೆ.

2. ಮೊದಲ ಬಾರಿಗೆ 100+ ರನ್‌ಗಳ ಸೋಲು

ಭಾರತ ತಂಡ ತನ್ನ ಟಿ20 ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎದುರಾಳಿ ವಿರುದ್ಧ 100ಕ್ಕಿಂತ ಹೆಚ್ಚು ರನ್‌ಗಳ ಬೃಹತ್ ಅಂತರದಿಂದ ಪರಾಭವಗೊಂಡು ಮುಖಭಂಗ ಅನುಭವಿಸಿದೆ.

3. ಎರಡನೇ ಅತಿ ಕನಿಷ್ಠ ಮೊತ್ತ

ಜೋಶ್ ಟಂಗ್ (4/28) ಹಾಗೂ ಜೋಫ್ರಾ ಆರ್ಚರ್ (3/29) ವೇಗಕ್ಕೆ ತತ್ತರಿಸಿದ ಭಾರತ 76 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20ಯಲ್ಲಿ ಭಾರತದ 2ನೇ ಅತಿ ಕಡಿಮೆ ಸ್ಕೋರ್ ಆಗಿದೆ. 2008ರಲ್ಲಿ ಆಸೀಸ್ ವಿರುದ್ಧ 74 ರನ್‌ಗಳಿಗೆ ಆಲೌಟ್ ಆಗಿದ್ದು ಮೊದಲ ಕನಿಷ್ಠ ಮೊತ್ತವಾಗಿದೆ.

4. ಪವರ್‌ಪ್ಲೇನಲ್ಲೇ ಪೆವಿಲಿಯನ್ ಪರೇಡ್

ಪವರ್‌ಪ್ಲೇನ (ಮೊದಲ 6 ಓವರ್) ಒಳಗಾಗಿಯೇ ಭಾರತ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಅಭಿಷೇಕ್, ವೈಭವ್, ಇಶಾನ್, ಶ್ರೇಯಸ್ ಹಾಗೂ ಅಕ್ಷರ್ ಪವರ್‌ಪ್ಲೇನಲ್ಲೇ ಔಟಾಗಿ ಕೆಟ್ಟ ದಾಖಲೆ ಬರೆದರು.

5. ಸತತ 5 ಪಂದ್ಯಗಳ ಸೋಲಿನ ಸುಳಿ

ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ತಂಡವು ಟಿ20 ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 5 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಕಾಣದೆ ಹೀನಾಯ ಸ್ಥಿತಿ ತಲುಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !