ಹಳ್ಳಿಗರ ಶ್ರಮ- ಸಮಯ ಉಳಿಸುತ್ತಿವೆ ಸೋಲಾರ್‌ ಗಿರಣಿಗಳು

ಹೊಸದಿಂಗತ ಡಿಜಿಟಲ್‌ ಡೆಸ್ಕ್‌ , ಶಿರಸಿ:
ಇಲ್ಲಿ ಕರೆಂಟ್ ಇಲ್ಲದಿದ್ದರೂ ಹಿಟ್ಟು, ಎಣ್ಣೆ ಎರಡೂ ಸಕಾಲಕ್ಕೆ ಸರಾಗವಾಗಿ ಇಲ್ಲಿನ ಯಂತ್ರ ಮಾಡುತ್ತದೆ. ಗ್ರಾಹಕರು ಹತ್ತಾರು ನಿಮಿಷದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಆಗುತ್ತಾರೆ! ಇದೆಲ್ಲ ನಗರದ ಮಾತಲ್ಲ, ಬದಲಿಗೆ ಹಳ್ಳಿಯಲ್ಲೂ ಇಂಥಹದೊಂದು ಶ್ರಮಗಾಥೆ ಅರಳುತ್ತಿದೆ.
ಉತ್ತರ ಕನ್ನಡದ ಅತ್ಯಂತ ಗ್ರಾಮೀಣ ಭಾಗವಾಗಿ ಸೂರ್ಯನ ಬಿಸಿಲೇ ಪೂರ್ಣ ಪ್ರಮಾಣದಲ್ಲಿ ಭುವಿಗೆ ತಲುಪಲು ಸಮಯ ಪಡೆದುಕೊಳ್ಳುವ ಹಳ್ಳಿಯಲ್ಲೂ ಸೂರ್ಯನಿಗೇ ಪ್ಲಗ್ ಹಾಕಿ ಒಂದು ಎಣ್ಣೆ, ಹಿಟ್ಟಿನ ಗಿರಣಿ ನಡೆಯುತ್ತಿದೆ.
ಏನಿದು ಸೌರ ಗಿರಣಿ:
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ, ಶಿರಸಿಗೆ ನೀರು ಪೂರೈಕೆ ಮಾಡುವ ಮಾರಿಗದ್ದೆ ದಾರಿಯಲ್ಲಿರುವ ಪುಟ್ಟ ಊರು ಕೋಡಶಿಂಗೆ. ಅಲ್ಲಿನ ರಸ್ತೆಯ ತಿರುವಿನಲ್ಲಿರುವ ಸುಬ್ರಾಯ ವೆಂ ಹೆಗಡೆ ಅವರ ಬದುಕು ಈಗ ಸೆಲ್ಕೋ ಸೋಲಾರ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಹೊಸ ತಿರುವು ಪಡೆದಿದೆ.
ಸೆಲ್ಕೋ ಫೌಂಡೇಶನ್ ಹಾಗೂ ಕೆಡಿಸಿಸಿ ಬ್ಯಾಂಕ್ ನೆರವಿನಲ್ಲಿ ಒಂದು ಗಿರಣಿ ಆರಂಭಿಸಿದ್ದಾರೆ.
ದೂರದ ಶಿರಸಿ ಪೇಟೆಗೋ, ಕಾನಸೂರಿಗೋ ಹೋಗಿ ತೆಂಗಿನ ಎಣ್ಣೆ, ಅಕ್ಕಿ, ಮೆಣಸು, ಅರಸಿನ ಹಿಟ್ಟು ಮಾಡಿಕೊಂಡು ಬರಬೇಕಿದ್ದ ಕೋಡಶಿಂಗೆ, ಅಡಕಳ್ಳಿ, ಕೆರೆಗದ್ದೆ, ತಟ್ಟೀಕೈ, ತ್ಯಾರಗಲ್, ಸರಕುಳಿ ಭಾಗದ ಗ್ರಾಮೀಣ ಜನರು ಇಲ್ಲಿಗೆ ಬಂದು ತಮ್ಮ ಮನೆ ಕೆಲಸ ಪೂರ್ಣಗೊಳಿಸಿಕೊಂಡು ಹೋಗುತ್ತಿದ್ದಾರೆ.
ಕೋಡಶಿಂಗೆ ಸುಬ್ರಾಯ ಹೆಗಡೆ ಅವರ ಮನೆಯಲ್ಲಿ ಎಣ್ಣೆ, ಗಿರಣಿ ಎರಡೂ ಆರಂಭವಾಗಿದೆ. ಕರೆಂಟ್ ಇರದೇ ಇದ್ದರೂ ಇಲ್ಲಿ ಕೆಲಸ ಆಗುತ್ತದೆ! ಸೋಲಾರ್ ಶಕ್ತಿ ಈ ಯಂತ್ರಗಳನ್ನು ಓಡಿಸುತ್ತಿದೆ.
ಸೋಲಾರ್ ಪ್ಲಗ್!:
ಸೂರ್ಯನ ಬಿಸಿಲು ಹಿಡಿಯಲು ಇವರ ಮನೆಯ ಮೇಲೆ 10 ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಸುಮಾರು 3200 ವ್ಯಾಟ್ ವಿದ್ಯುತ್ ಹಿದಡಿದುಕೊಳ್ಳಲು 180 ಎಎಚ್‌ನ 8 ಬ್ಯಾಟರಿ ಬಳಸಲಾಗಿದೆ. ಆರು ಕೇವಿ ಇನವರ್ಟರ್ ಇಲ್ಲಿ ಮೂರು ಪ್ರತ್ಯೇಕ ಯಂತ್ರ ನಡೆಯಲು ಸಹಾಯಕವಾಗಿದೆ.
ಕೋಲ್ಡ್ ಪ್ರೊಸೆಸ್‌ನಲ್ಲಿ ನಡೆಯುವ ದಿನಕ್ಕೆ ಕನಿಷ್ಠ 1 ಕ್ವಿಂಟಾಲ್ ತೆಂಗಿನ ಕೊಬ್ಬರಿಯನ್ನು ಎಣ್ಣೆ ಮಾಡಿಕೊಡುವ ಸಾಮರ್ಥ್ಯದ ಯಂತ್ರ ಓಡುತ್ತದೆ. ಮೆಣಸಿನ ಪುಡಿ, ಅರಸಿನ ಪುಡಿ, ಅಕ್ಕಿ ಹಿಟ್ಟು ಮಾಡುವ ಎರಡು ಪ್ರತ್ಯೇಕ ಯಂತ್ರಗಳೂ ಇವೆ. ಸುಮಾರು 6.50 ಲಕ್ಷ ರೂ. ತಗುಲಿದ್ದು, ಸೆಲ್ಕೋ ಅಳವಡಿಸಿದೆ.
ಒಟ್ಟಾರೆ ಸೊಲಾರ್ ಚಾಲಿತ ಯಂತ್ರಗಳಿಂದ ಈ ಭಾಗದ ಗ್ರಾಮೀಣ ಜನರ ಸಮಯ ಹಾಗೂ ಶ್ರಮ ಉಳಿತಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!