ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೂವರೆ ವರ್ಷದ ದಾಂಪತ್ಯದ ಸವಿನೆನಪಾಗಿ ಮನೆಗೆ ಬಂದಿದ್ದ ಪುಟ್ಟ ಲಕ್ಷ್ಮಿಯ ನಗು ಕೇವಲ ಇಪ್ಪತ್ತೇ ದಿನಕ್ಕೆ ಮಾಸಿಹೋಗಿದೆ. ತಾಯಿಯ ಎದೆಹಾಲು ಕುಡಿಯುತ್ತಿದ್ದ ವೇಳೆ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ರಾಮನಾಥಪುರಂನಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ, ಕೂಲಿ ಕಾರ್ಮಿಕ ಮುರಳಿ ಮತ್ತು ವರದಲಕ್ಷ್ಮಿ ದಂಪತಿಗೆ ಕಳೆದ ಡಿಸೆಂಬರ್ 20 ರಂದು ಕೋಯಮತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ ಮಗುವಿಗೆ ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಮಗು ಸತತವಾಗಿ ಅಳುತ್ತಿದ್ದರಿಂದ ಗಾಬರಿಗೊಂಡ ದಂಪತಿ ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದರು.
ವೈದ್ಯರ ತಪಾಸಣೆಯ ನಂತರವೂ ಮಗು ಅಳುವುದನ್ನು ನಿಲ್ಲಿಸದಿದ್ದಾಗ, ಹಸಿವಿರಬಹುದೆಂದು ಭಾವಿಸಿದ ತಾಯಿ ವರದಲಕ್ಷ್ಮಿ ಮಗುವಿಗೆ ಹಾಲುಣಿಸಲು ಮುಂದಾಗಿದ್ದಾರೆ. ಆದರೆ ಹಾಲು ಕುಡಿಯುವ ಸಂದರ್ಭದಲ್ಲಿ ಮಗುವಿಗೆ ಇದ್ದಕ್ಕಿದ್ದಂತೆ ಕೆಮ್ಮು ಕಾಣಿಸಿಕೊಂಡಿದೆ. ಈ ವೇಳೆ ಹಾಲು ಉಸಿರಾಟದ ನಾಳಕ್ಕೆ ಸಿಲುಕಿ ಮಗು ಚಲನರಹಿತವಾಗಿದೆ.
ತಕ್ಷಣ ವೈದ್ಯರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಗುವಿನ ಸಾವಿನ ಸುದ್ದಿ ಕೇಳಿ ತಾಯಿ ವರದಲಕ್ಷ್ಮಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಹುಟ್ಟಿದ ಕೆಲವೇ ದಿನಗಳಲ್ಲಿ ಮಗು ಮೃತಪಟ್ಟಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

