ಹೊಸದಿಗಂತ ಡಿಜಿಟಲ್ ಡೆಸ್ಕ್:
ಇವರ ಹೆಸರು ಕೃಷ್ಣಕುಮಾರ್. ತಂದೆ ಕೊಡಿಸಿದ ಹಳೆಯ ಸ್ಕೂಟರ್‌ನಲ್ಲಿ ತಾಯಿಯನ್ನು ದೇಶ ಸುತ್ತಿಸಿದ ಆಧುನಿಕ ಶ್ರವಣ ಕುಮಾರ! ಎಂದೇ ಖ್ಯಾತರಾಗಿದ್ದಾರೆ. ಸ್ನೇಹಿತರು, ಓರಗೆಯವರೊಂದಿಗೆ ಪ್ರವಾಸ ಹೋಗಿ ಸಂಭ್ರಮಿಸುವ ಯುವಜನರು ಸಾಮಾನ್ಯ. ಆದರೆ ಮೈಸೂರಿನ 44ರ ಹರೆಯದ ಈ ಕೃಷ್ಣಕುಮಾರ್ ಒಂದಿಷ್ಟು ಡಿಫರೆಂಟ್. ಇವರು ತಾಯಿ 72 ಹರೆಯದ ಚೂಡರತ್ನಮ್ಮ ಅವರನ್ನು ತನ್ನ ಸ್ಕೂಟರ್‌ನಲ್ಲೇ ತೀರ್ಥಯಾತ್ರೆ ಮಾಡಿಸುತ್ತಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರೆಯಲ್ಲಿ ನಿರತರಾಗಿರುವ ಇವರು ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು.
ಕೃಷ್ಣ ಕುಮಾರ್ ಈ ಹಿಂದೆ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ವರ್ಷಗಳ ಹಿಂದೆ ರಾಜೀನಾಮೆ ನೀಡಿ ಋಷಿ ಸದೃಶ ಜೀವನ ನಡೆಸುತ್ತಿದ್ದಾರೆ. ನನ್ನ ತಾಯಿ 60 ವರ್ಷಗಳಿಗೂ ಹೆಚ್ಚು ಕಾಲ ನಾಲ್ಕು ಗೋಡೆಯ ಮಧ್ಯೆಯೇ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನ ಅವರ ಆಸೆಗಳನ್ನು ಈಡೇರಿಸುವುದೇ ನನ್ನ ಪರಮೋದ್ದೇಶವಾಗಿಸಿಕೊಂಡಿದ್ದು, 20 ವರ್ಷಗಳ ಹಿಂದೆ ತಂದೆ ಕೊಡಿಸಿದ ಸ್ಕೂಟರ್‌ನಲ್ಲೇ ಕರೆದೊಯ್ಯುತ್ತಿದ್ದೇನೆ. ಅದನ್ನೇ ತಂದೆ ಎಂದು ತಿಳಿದುಕೊಂಡು ನಾವು ಮೂವರೂ ಜತೆಯಾಗಿ ಪ್ರಯಾಣಿಸುತ್ತಿದ್ದೇವೆ ಎಂಬ ಭಾವನೆ ಹೊಂದಿದ್ದೇವೆ ಎನ್ನುತ್ತಾರೆ.
2018ರಲ್ಲಿ ಮೈಸೂರಿನಿಂದ ಇದೇ ಸ್ಕೂಟರ್‌ನಲ್ಲಿ ದೇಶ ಸುತ್ತಾಟ ಪ್ರವಾಸ ಆರಂಭಿಸಿದ ತಾಯಿ ಮಗನ ಜೋಡಿ ಸಮಗ್ರ ಭಾರತ ಸುತ್ತಿದೆ. ಬಳಿಕ ನೇಪಾಲ, ಭೂತನ್, ಮಾಯನ್ಮಾರ್ ದೇಶಗಳನ್ನೂ ಸಂದರ್ಶಿಸಿದ್ದಾರೆ. ಅಷ್ಟರಲ್ಲಿ ಕೊರೋನಾ ಸಮಸ್ಯೆ ತಲೆ ದೋರಿದ ಕಾರಣ 2020ರಲ್ಲಿ ಮೈಸೂರಿಗೆ ಹಿಂದಿರುಗಿದ್ದು, ಬಳಿಕ ಸ್ಥಳೀಯವಾಗಿಯೇ ಸುತ್ತಾಡುತ್ತಿದ್ದಾರೆ. ಧರ್ಮಸ್ಥಳ, ಪುತ್ತೂರಿಗೆ ತೆರಳಿ ಬಳಿಕ ವಿಟ್ಲದಲ್ಲಿರುವ ತಾಯಿಯ ಸ್ನೇಹಿತೆಯ ಮನೆಗೆ ತೆರಳುತ್ತೇವೆ ಎಂದು ಕೃಷ್ಣಕುಮಾರ್ ನುಡಿಯುತ್ತಾರೆ.
ನನ್ನದು ಮಾತೃ ಸೇವಾ ಸಂಕಲ್ಪ ಯಾತ್ರೆ. 2018ರ ಜ.14 ರಂದು ಯಾತ್ರೆಯನ್ನು ಆರಂಭಿಸಿದ್ದೇವೆ. ಕುಕ್ಕೆಯ ತನಕ ಸುಮಾರು 57,930ಕಿ.ಮೀ. ದೂರ ಪ್ರಯಾಣಿಸಿದ್ದೇವೆ. ನಾಲ್ಕು ದೇಶಗಳನ್ನು ಸುತ್ತಿದ್ದೇವೆ. ಈ ಸ್ಕೂಟರನ್ನು 50 ವರ್ಷಗಳ ಹಿಂದೆ ನನ್ನ ತಂದೆಯವರು ನನಗೆ ತೆಗೆದು ಕೊಟ್ಟಿದ್ದರು. ಆದುದರಿಂದ ಅವರಿಲ್ಲದ ಈ ಸಮಯದಲ್ಲಿ ಸ್ಕೂಟರ್‌ನಲ್ಲಿ ತಂದೆ ಇದ್ದಾರೆ ಎಂದು ಭಾವಿಸಿಕೊಂಡು ನಾನು, ಅಮ್ಮ ಮತ್ತು ತಂದೆ ಪ್ರಯಾಣ ಬೆಳೆಸುತ್ತಿದ್ದೇವೆ. ಸರ್ವರೂ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ತಂದೆ-ತಾಯಿ ಪ್ರತ್ಯಕ್ಷ ದೇವರು ಎಂದು ಕೃಷ್ಣ ಕುಮಾರ್ ಹೇಳಿದರು.