ಹೊಸದಿಗಂತ ವರದಿ, ಮಡಿಕೇರಿ:
ಹಿಜಾಬ್ ತೆಗೆದು ತರಗತಿಗೆ ಬಂದು ಕುಳಿತುಕೊಳ್ಳುವಂತೆ ಸೂಚಿಸಿದ ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ತರಗತಿ ಪ್ರವೇಶ ಸಂಬಂಧ ಶುಕ್ರವಾರ ವಿದ್ಯಾರ್ಥಿಗಳು ವಾಗ್ವಾದಕ್ಕೆ ಇಳಿದ ಸಂದರ್ಭ ಹೈಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಗಟ್ಟಿಧ್ವನಿಯಲ್ಲಿ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಮಹಮ್ಮದ್ ತೌಸಿಫ್ ಎಂಬಾತ ನೀನು ಹೆಚ್ಚು ದಿನ ಬದುಕುವುದಿಲ್ಲ ಎಂದು ಬೆದರಿಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ಬೆದರಿಕೆ ಒಡ್ಡಿದ್ದಾನೆ.
ಈ ಸಂಬಂಧ ಪ್ರಾಂಶುಪಾಲ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜು ಆವರಣದಲ್ಲಿ ಒಂದನೇ ತರಗತಿಯಿಂದ ಪದವಿವರೆಗೆ ತರಗತಿಗಳು ನಡೆಯುತ್ತವೆ. ಕಾಲೇಜು ಒಳಗೆ ಗಲಾಟೆಯಾದರೆ, ಯಾವುದೇ ತರಗತಿಗೆ ಪಾಠ ಪ್ರವಚನ ಮಾಡಲು ಸಾಧ್ಯವಾಗುವುದಿಲ್ಲ. ಈ ಸಲುವಾಗಿ ಕೋರ್ಟ್ ಆದೇಶ ಪಾಲಿಸುವಂತೆ ಹಾಗೂ ಅನಾವಶ್ಯಕ ಗೊಂದಲ ಉಂಟುಮಾಡುವವರನ್ನು ಹೊರಗೆ ಕಳುಹಿಸುವಂತೆ ಪೊಲೀಸರಿಗೆ ಹೇಳಿದ್ದೆ ಅದಕ್ಕಾಗಿ ಹೀಗೆಲ್ಲಾ ಆಗಿದೆ ಎಂದು ವಿಜಯ್ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶವನ್ನು ಒಬ್ಬ ಸರ್ಕಾರಿ ನೌಕರ ಪಾಲಿಸಿದರೆ, ಕೊಲೆ ಬೆದರಿಕೆ ಹಾಕುತ್ತಾರೆ ಎಂದರೆ ವ್ಯವಸ್ಥೆ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಾಂಶುಪಾಲರು ಪ್ರಶ್ನಿಸಿದ್ದಾರೆ.
ಐಸಿಸ್ ಉಗ್ರರು ಕೂಡಾ ಶಿಕ್ಷಕರನ್ನು ಕರೆದುಕೊಂಡು ಹೋದಾಗ ಗೌರವದಿಂದ ನೋಡಿಕೊಂಡಿದ್ದರು. ಈಗಿನ ಪರಿಸ್ಥಿತಿ ಏನಾಗುತ್ತಿದೆ ಎಂದು ಪ್ರಾಂಶುಪಾಲ ವಿಜಯ್ ಬೇಸರ ವ್ಯಕ್ತ ಪಡಿಸಿದರು.
ಒಬ್ಬ ಪ್ರಾಂಶುಪಾಲನಾಗಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಹಿತಾಸಕ್ತಿಯನ್ನೂ ಕಾಪಾಡಬೇಕಾಗಿದೆ. ಬೆದರಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಹೇಳಿದ ಅವರು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಕೋರಲಾಗಿದೆ ಎಂದರು.